

ಲಕ್ನೋ: ಏ.14 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಆಗಬೇಕಿರುವ ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇಯ ಮೋಹಂದ್ ರೇಂಜ್‌ನಲ್ಲೀ ಭೀಕರ ಸರಣಿ ಅಪಘಾತ ನಡೆದಿದೆ. ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್ ಸೇರಿ ಸುಮಾರು 7 ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಉತ್ತರ ಪ್ರದೇಶದ ಸಹರಾನ್‌ಪುರದ ಬಿಹಾರಿಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಠಾತ್ ಬ್ರೇಕ್ ವೈಫಲ್ಯ ಮತ್ತು ಅನಿಯಂತ್ರಿತ ವೇಗದಿಂದಾಗಿ ಭೀಕರ ಅಪಘಾತ ಸಂಭವಿಸಿದೆ. ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಟ್ರಕ್ ಕಾರುಗಳಿಗೆ ಡಿಕ್ಕಿ ಹೊಡೆದು ಹಾನಿಗೊಳಗಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಿದ್ದಾರೆ.


ಏಪ್ರಿಲ್ 14 ರಂದು ಪ್ರಧಾನಿಯವರಿಂದ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೆ ಒಂದು ದಿನ ಮುನ್ನ ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆ ಹೇಗಿತ್ತೆಂದ್ರೆ, ಎಲ್‌ಪಿಜಿ ತುಂಬಿದ್ದ ಟ್ರಕ್ (LPG Truck) ಹಿಂಬದಿಯಿಂದ ಡಿಕ್ಕಿ ಹೊಡೆದ ರಭಸಕ್ಕೆ ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ವಾಹನಗಳ ರಾಶಿ ಗುಡ್ಡೆ ಹಾಕಿದಂತೆ ದೃಶ್ಯ ಕಂಡುಬಂದಿದ್ದು, ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿವೆ. ಈ ವೇಳೆ ಕೆಲಕಾಲ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯೂ ಆಗಿದೆ.
