ಪುತ್ತೂರು; ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸೀಮಿತವಾಗಿ ವೈದ್ಯರು ನೀಡಿದ ಪೈನ್ ಕಿಲ್ಲರ್ ಗಳನ್ನು ಸ್ವಯಂ ವೈದ್ಯ ನೆಲೆಯಲ್ಲಿ ನಿರಂತರವಾಗಿ ಬಳಕೆ ಮಾಡುವ ಮೂಲಕ ಕಿಡ್ನಿ ಸಮಸ್ಯೆಗಳಿಗೆ ತಮ್ಮನ್ನು ತಾವು ತೆರೆದುಕೊಳ್ಳುವ ಯುವಜನತೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ `ಪೈನ್‍ಕಿಲ್ಲರ್ ತ್ಯಜಿಸಿ..ಕಿಡ್ನಿ ರಕ್ಷಿಸಿ ಜೀವ ಉಳಿಸಿ’ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಇಂತಹ ಜಾಥಾವೊಂದನ್ನು ಪುತ್ತೂರಿನಲ್ಲಿ ಆರಂಭಿಸಲಾಗಿದೆ. ಈ ಹೋರಾಟ ನಿರಂತರವಾಗಿ ಸಾಗಲಿದ್ದು, ಪ್ರತೀ 6 ತಿಂಗಳಿಗೊಮ್ಮೆ ಜಾಗೃತಿ ಕ್ಯಾಂಪ್ ಗಳನ್ನು ನಡೆಸಲಾಗುವುದು ಎಂದು ಶಾಸಕ ಅಶೋಕ್ ರೈ ಹೇಳಿದರು.

ಪುತ್ತೂರಿನ ದರ್ಬೆ ವೃತ್ತದ ಬಳಿಯಲ್ಲಿ ಜಾಥಾಕ್ಕೆ ಚಾಲನೆ ನೀಡಿದ ಅವರು, ಪುತ್ತೂರಿನಲ್ಲಿ ಕಳೆದ 3 ತಿಂಗಳ ಹಿಂದೆ 180 ಮಂದಿ ಬಡವರ್ಗದ ಜನತೆಗೆ ಕಿಡ್ನಿವೈಫಲ್ಯ ಉಂಟಾಗಿ ಡಯಾಲಿಸ್‍ಗಾಗಿ ಸರ್ಕಾರಿ ಆಸ್ಪತ್ರೆ ಬರುತ್ತಿದ್ದರು. ಆದರೆ ಈಗ ಈ ಸಂಖ್ಯೆ 208 ಕ್ಕೆ ತಲುಪಿದೆ. ಬಹುತೇಕ ಈ ಕಿಡ್ನಿ ವೈಫಲ್ಯತೆಗೆ ಪೈನ್‍ಕಿಲ್ಲರ್ ಕಾರಣವಾಗುತ್ತಿದೆ. ಈ ಪೈನ್ ಕಿಲ್ಲರ್ ಅನಾಯಾಸವಾಗಿ ಜನತೆಗೆ ದೊರಕುತ್ತಿದ್ದು, ಜನತೆಯ ಆರೋಗ್ಯವನ್ನು ನಾಶ ಮಾಡುತ್ತಿದೆ. ವೈದ್ಯರ ಅನುಮತಿ ರಹಿತವಾಗಿ ಯಾರೂ ಇದನ್ನು ಬಳಕೆ ಮಾಡಬಾರದು. ಈ ನಿಟ್ಟಿನಲ್ಲಿ ವಿಶೇಷವಾಗಿ ಯುವಜನತೆಯಲ್ಲಿ ಜಾಗೃತಿ ಮೂಡಬೇಕಾಗಿದೆ. ನಮ್ಮ ಬದುಕನ್ನು ರಕ್ಷಿಸಿಕೊಳ್ಳಲು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಈ ಜಾಗೃತಿ ಜಾಥಾ ನಡೆಯುತ್ತಿದೆ ಎಂದು ಅವರು ಹೇಳಿದರು.

ಪುತ್ತೂರಿನ ದರ್ಬೆ ವೃತ್ತದಿಂದ ಆರಂಭಗೊಂಡ ಈ ಜಾಗೃತಿಜಾಥಾ ಪುತ್ತೂರಿನ ಮುಖ್ಯರಸ್ತೆಯಲ್ಲಿ ಬೊಳುವಾರು ತನಕ ನಡೆಯಿತು.

ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ತಾಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತವೈದ್ಯಾಧಿಕಾರಿ ಡಾ.ಯದುರಾಜ್, ಡಾ.ಹೇಮಲತಾ, ಡಾ.ದೀಪಿಕಾ, ಡಾ.ರಾಧಿಕಾ, ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ,ಮಹಿಳಾ ಕಾಂಗ್ರೆಸ್ಸಿನ ಚಂದ್ರಪ್ರಭಾ,ಅಕ್ರಮಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಕೋಡಿಂಬಾಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಮತ್ತಿತರರು ಭಾಗಿಯಾಗಿದ್ದರು.