ನವದೆಹಲಿ: ಅಮೆರಿಕ ಮತ್ತು ಇರಾನ್‌ ನಡುವಿನ ಯುದ್ಧ 38ನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದ ಎಲ್‌ಪಿಜಿ ಕೊರತೆ ಆತಂಕದಲ್ಲಿದ್ದ ಜನಕ್ಕೆ ಕೇಂದ್ರ ಸರ್ಕಾರ ಮತ್ತೆ ಅಭಯ ನೀಡಿದೆ. ದೇಶದಲ್ಲಿ ಎಲ್‌ಪಿಜಿ ಕೊರತೆ ಇಲ್ಲ ಎಂದಿರುವ ಕೇಂದ್ರ ಸರ್ಕಾರ ಮತ್ತೊಂದು ಕಡೆ ಕೊರತೆ ನೀಗಿಸಲು 5 ಕೆಜಿ ಗ್ಯಾಸ್‌ ಸಿಲಿಂಡರ್‌ಗಳ ಪೂರೈಕೆಯನ್ನ ಹೆಚ್ಚಿಸಿದೆ.

ಹೌದು. ಭಾರತದಲ್ಲಿ ಎಲ್‌ಪಿಜಿ ಕೊರತೆಯಿಲ್ಲ ಸಾಕಷ್ಟು ಲಭ್ಯವಿದೆ. ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. 5 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ಗಳು ಎಲ್ಲ ಏಜೆನ್ಸಿಗಳಲ್ಲೂ ಲಭ್ಯವಿದೆ. ಸೂಕ್ತ ಗುರುತಿನ ಚೀಟಿ (ID Card) ತೋರಿಸಿ ಗ್ರಾಹಕರು ಸಿಲಿಂಡರ್‌ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

6.6 ಲಕ್ಷ ಸಿಲಿಂಡರ್‌ ಮಾರಾಟ
ಎಲ್‌ಪಿಜಿ ಬಿಕ್ಕಟ್ಟು ಪೂರೈಸಲು 5 ಕೆಜಿ ಸಿಲಿಂಡರ್‌ (5 Kg LPG Cylinders) ಪೂರೈಕೆ ಹೆಚ್ಚಿಸಿದ ಬೆನ್ನಲ್ಲೇ ಇವುಗಳ ಖರೀದಿಗೂ ಜನ ಆಸಕ್ತಿ ತೋರಿದ್ದಾರೆ. ಕಳೆದ ಮಾರ್ಚ್‌ 23 ರಿಂದ ದೇಶದಲ್ಲಿ ಸುಮಾರು 6.6 ಲಕ್ಷ ಸಿಲಿಂಡರ್‌ಗಳು ಮಾರಾಟವಾಗಿದೆ. ಸದ್ಯ ಈ ಸಣ್ಣ ಸಿಲಿಂಡರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಜನ ಸೂಕ್ತ ದಾಖಲಾತಿ ನೀಡಿ ಗ್ಯಾಸ್ ಏಜೆನ್ಸಿಗಳಿಂದ ಖರೀದಿಸಬಹುದು ಎಂದು ಪೆಟ್ರೋಲಿಯಂ ಸಚಿವಾಲಯ ಹೇಳಿದೆ.

ಐಡಿ ಪ್ರೂಫ್ ಅಗತ್ಯ
5 ಕೆಜಿ ಸಿಲಿಂಡರ್‌ ಖರೀದಿಸಲು ಯಾವುದೇ ವಾಸಸ್ಥಳದ ಸಾಕ್ಷ್ಯ ತೋರಿಸುವ ಅಗತ್ಯವಿಲ್ಲ. ಆದ್ರೆ ಯಾವುದಾದರೂ ಒಂದು ಗುರುತಿನ ಚೀಟಿ ಮಾತ್ರ ತೋರಿಸಿ, ಸಿಲಿಂಡರ್‌ ಖರೀದಿ ಮಾಡಬಹುದು ಎಂದು ಸರ್ಕಾರ ಎಚ್ಚರಿಸಿದೆ.