ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿಯಲ್ಲಿ ಮಾರ್ಚ್ 23 ಸೋಮವಾರದಂದು ಮಾರ್ಚ್ 28 ರವರೆಗೆ ನಡೆಯಲಿರುವ ಪ್ರಗಲ್ಭ 2025–26 ಬೇಸಿಗೆ ಶಿಬಿರಕ್ಕೆ ಭವ್ಯ ಚಾಲನೆ ನೀಡಲಾಯಿತು.


ಶಿಬಿರವು ವಿದ್ಯಾರ್ಥಿಗಳ ಭಕ್ತಿಭಾವಪೂರ್ಣ ಸರಸ್ವತಿ ವಂದನೆಯೊಂದಿಗೆ ಆರಂಭಗೊಂಡಿತು. ವಿದ್ಯಾಲಯದ ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀಯುತ ಜಿನ್ನಪ್ಪ ಪೂವಾಜೆ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಉದ್ಘಾಟಕರಾಗಿ ಆಗಮಿಸಿದ ಖ್ಯಾತ ನಿರೂಪಕ ಸುರೇಶ್ ಪಡಿಪಂಡ ಅವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, “ಶ್ರೀರಾಮ ವಿದ್ಯಾಲಯ ಇನ್ನಷ್ಟು ಶೈಕ್ಷಣಿಕ ಸಾಧನೆಗಳನ್ನು ಮಾಡಲಿ. ವಿದ್ಯಾರ್ಥಿಗಳು ಕೇವಲ ಪುಸ್ತಕ ಜ್ಞಾನವಷ್ಟೇ ಅಲ್ಲದೆ ಜೀವನ ಮೌಲ್ಯಗಳನ್ನು ಕೂಡ ಅಳವಡಿಸಿಕೊಳ್ಳಬೇಕು. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ” ಎಂದು ಪ್ರೇರಣಾದಾಯಕ ಮಾತುಗಳನ್ನು ಹೇಳಿದರು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀರಾಮ ಶಾಲೆ ಉಪ್ಪಿನಂಗಡಿಯ ಕಛೇರಿ ಸಹಾಯಕ ಶ್ರೀಯುತ ಚಿದಾನಂದ ಶ್ರೀಮಾನ್ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡು, ಚಿತ್ರಕಲೆ ಹಾಗೂ ಸೃಜನಾತ್ಮಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರಹಾಕಬೇಕು ಎಂದು ಸಲಹೆ ನೀಡಿದರು. ತಮ್ಮ ಗಾಯನದ ಮೂಲಕ ವಿದ್ಯಾರ್ಥಿಗಳನ್ನು ಉತ್ಸಾಹಗೊಳಿಸಿ, ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದರು. ಉಪ್ಪಿನಂಗಡಿ ಶ್ರೀರಾಮ ಶಾಲೆಯ ಶ್ರೀಮತಿ ಪೂಜಾಶ್ರೀ ಮಾತಾಜಿ ವಿದ್ಯಾರ್ಥಿಗಳಿಗೆ ಶಿಸ್ತು, ಸಂಸ್ಕಾರ ಮತ್ತು ಗುರಿ ಸಾಧನೆಗೆ ಅಗತ್ಯವಾದ ಮನೋಬಲದ ಮಹತ್ವವನ್ನು ವಿವರಿಸಿದರು.

“ಬಾಲ್ಯದಲ್ಲೇ ಉತ್ತಮ ಗುಣಗಳನ್ನು ಅಳವಡಿಸಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ” ಎಂದು ಅವರು ತಿಳಿಸಿದರು.ಶ್ರೀರಾಮ ಶಾಲೆ ಉಪ್ಪಿನಂಗಡಿಯ ಇನ್ನೋರ್ವ ಮಾತಾಜಿ ದೀಪಿಕಾ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಗೌರವವನ್ನು ಹೆಚ್ಚಿಸಿದರು.


ಈ ಸಂದರ್ಭದಲ್ಲಿ ಕನ್ನಡ ಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕರಾದ ಗಣೇಶ್ ವಾಗ್ಲೆ ಹಾಗೂ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಕಾವ್ಯ ಮಾತಾಜಿ ಉಪಸ್ಥಿತರಿದ್ದರು.


ಶ್ರೀಮತಿ ಶುಭರಾಣಿ ಮಾತಾಜಿ ಸ್ವಾಗತಿಸಿ,ಶ್ರೀಮತಿ ದಿವ್ಯ ಮಾತಾಜಿ ವಂದಿಸಿದರು. ಶ್ರೀಮತಿ ಭಾಗೀರಥಿ ಮಾತಾಜಿ ಕಾರ್ಯಕ್ರಮವನ್ನು ಸಮರ್ಪಕವಾಗಿ ಸಂಯೋಜಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಡ್ರಾಯಿಂಗ್ ಹಾಗೂ ಕರಕುಶಲ ಚಟುವಟಿಕೆಗಳನ್ನು ನಡೆಸಲಾಯಿತು.