ರ್ಕಾರಿ ಶಾಲೆ: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದು ದೊರೆತಿದೆ. ವಿದ್ಯಾ ವಿಕಾಸ ಯೋಜನೆಯಡಿ 2026–27ನೇ ಸಾಲಿನಲ್ಲಿ ಸುಮಾರು 36.56 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಶೂ ಮತ್ತು ಸಾಕ್ಸ್ ವಿತರಿಸಲು ಸರ್ಕಾರ ಆದೇಶ ಹೊರಡಿಸಿದೆ.

ಈ ಯೋಜನೆಗಾಗಿ ಸರ್ಕಾರ ಒಟ್ಟು ₹104 ಕೋಟಿ ವೆಚ್ಚ ಮಾಡಲಿದ್ದು, ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಪ್ರತಿ ವಿದ್ಯಾರ್ಥಿಗೆ ಒಂದು ಜೋಡಿ ಶೂ ಹಾಗೂ ಎರಡು ಜೋಡಿ ಸಾಕ್ಸ್ ನೀಡಲಾಗುತ್ತದೆ.

ಗುಣಮಟ್ಟಕ್ಕೆ ಆದ್ಯತೆ
ಉತ್ತಮ ಗುಣಮಟ್ಟದ ಕಪ್ಪು ಬಣ್ಣದ ಶೂ ಹಾಗೂ ಬಿಳಿ ಬಣ್ಣದ ಸಾಕ್ಸ್ ಖರೀದಿಗಾಗಿ ಪಾರದರ್ಶಕ ಟೆಂಡರ್ ಪ್ರಕ್ರಿಯೆ ನಡೆಸಲು ಸೂಚಿಸಲಾಗಿದೆ. ಗುಣಮಟ್ಟದ ಮೇಲ್ವಿಚಾರಣೆಗಾಗಿ ತಾಂತ್ರಿಕ ತಜ್ಞರ ಸಮಿತಿಯನ್ನು ರಚಿಸುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ.

ಅಧಿಕ ಮಳೆಯಾಗುವ ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ ಜಿಲ್ಲೆ, ಉಡುಪಿ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಶೈಕ್ಷಣಿಕ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೂಗಳನ್ನು ವಿತರಿಸಲಾಗುವುದಿಲ್ಲ. ಈ ಭಾಗಗಳ ಎಸ್‌ಡಿಎಂಸಿ ಗಳಿಂದ ಶೂಗಳ ಬದಲಿಗೆ ಮಳೆಗೆ ಅನುಕೂಲವಾದ ಪಾದರಕ್ಷೆಗಳು (ಸ್ಯಾಂಡಲ್ಸ್/ಫುಟ್‌ವೇರ್) ನೀಡುವಂತೆ ಮನವಿ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಕಟ್ಟುನಿಟ್ಟಿನ ಸೂಚನೆ
ಹಿಂದಿನ ವರ್ಷಗಳಲ್ಲಿ ಗುಣಮಟ್ಟದ ಬಗ್ಗೆ ದೂರುಗಳು ಬಂದ ಹಿನ್ನೆಲೆ, ಈ ಬಾರಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ವಿತರಣೆ ಪೂರ್ಣಗೊಳಿಸಬೇಕು ಹಾಗೂ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.