ಭುವನೇಶ್ವರ: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮತ ಚಲಾಯಿಸಿದ್ದಕ್ಕೆ ಶಾಸಕಿ ಸೋಫಿಯಾ ಫಿರ್ದೌಸ್ ಅವರನ್ನು ಪಕ್ಷದಿಂದಲೇ ಕಾಂಗ್ರೆಸ್‌ ಉಚ್ಚಾಟನೆ ಮಾಡಿದೆ.

ವಿಪ್‌ ಜಾರಿ ಮಾಡಿದ್ದರೂ ಅಡ್ಡ ಮತದಾನ ಮಾಡಿದ್ದಕ್ಕೆ ಸೋಫಿಯಾ ಫಿರ್ದೌಸ್ ಜೊತೆ ಸನಾ ಖೇಮುಂಡಿ ಶಾಸಕ ರಮೇಶ್ ಜೆನಾ, ಮೊಹನ್ನಾ ಶಾಸಕ ದಶರತ್ ಗಮಾಂಗೊ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಪಕ್ಷಕ್ಕೆ ದ್ರೋಹ ಮಾಡಿದವರು ರಾಷ್ಟ್ರಕ್ಕೆ ದ್ರೋಹ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಆಕ್ರೋಶ ಹೊರಹಾಕಿದ್ದಾರೆ.

ಚುನಾವಣೆಗೆ ಮೊದಲೇ ಸೋಫಿಯಾ ಅವರು ಕಾಂಗ್ರೆಸ್‌ ಪಕ್ಷದ ವಿರುದ್ಧವೇ ಮಾತನಾಡಿದ್ದರು. ಶಾಸಕರನ್ನು ಸಂಪರ್ಕಿಸದೇ ಬಿಜೆಡಿ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಪಕ್ಷ ಹೇಳಿದ್ದಕ್ಕೆ ಸಿಟ್ಟು ಹೊರಹಾಕಿದ್ದರು. ಬಿಜೆಡಿ ಬಿಜೆಪಿಯ ಬಿ ತಂಡವಾಗಿರುವಾಗ ಕಾಂಗ್ರೆಸ್‌ ಬೆಂಬಲ ನೀಡಿದ್ದು ಹೇಗೆ ಎಂದು ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೇ ರಾಜ್ಯ ಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ತನ್ನನ್ನು ಹೊರಗಡೆ ಇರಿಸಿದ್ದಕ್ಕೆ ಸಿಟ್ಟು ಹೊರಹಾಕಿದೆ.