ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆದ್ದರೆ ಉಪಮುಖ್ಯಮಂತ್ರಿ ಹುದ್ದೆಯನ್ನು ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಅವರಿಗೆ ಬಿಜೆಪಿ ನೀಡಿದೆ.

ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ ಬಿಜೆಪಿ ಟಿವಿಕೆಗೆ ಸುಮಾರು 80 ಸ್ಥಾನಗಳನ್ನು ನೀಡಿದೆ. ಚುನಾವಣೆಗೆ ಮುನ್ನ ಎರಡೂ ಪಕ್ಷಗಳ ನಡುವಿನ ಮಾತುಕತೆ ಅಂತಿಮ ಹಂತಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಇದು ಕಾರ್ಯರೂಪಕ್ಕೆ ಬಂದರೆ ರಾಜ್ಯದಲ್ಲಿ ಚುನಾವಣಾ ಲೆಕ್ಕಾಚಾರಗಳೇ ಬದಲಾಗುವ ಸಾಧ್ಯತೆಯಿದೆ. ವಿಜಯ್‌ ಅವರು ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಈ ಹಿಂದೆ ನಾನು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ವಿಜಯ್‌ ಹೇಳಿದ್ದರು.

ವಿಜಯ್‌ ಅವರಿಗೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಮೂಲಗಳ ಪ್ರಕಾರ ಹಲವಾರು ಕ್ಷೇತ್ರಗಳಲ್ಲಿ ಶೇ.2 ರಷ್ಟು ಮತಗಳು ಬಿದ್ದರೂ ಸಹ ಗೆಲುವಿನ ದಿಕ್ಕನ್ನು ಬದಲಾಯಿಸುವ ಸಾಧ್ಯತೆಯಿದೆ.  

ತಮಿಳುನಾಡಿನಲ್ಲಿ ಪಕ್ಷಗಳ ಮಧ್ಯೆ ಭಾರೀ ನಿಕಟ ಸ್ಪರ್ಧೆಯಿದೆ. ಹಲವು ಕ್ಷೇತ್ರಗಳಲ್ಲಿ ಬಹಳ ಸಣ್ಣ ಅಂತರದಿಂದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಾರೆ. ಇಲ್ಲಿಯವರೆಗೆ ವಿಜಯ್‌ ಅವರು ಟಿವಿಕೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲಿದೆ ಎಂದು ಹೇಳಿಕೊಂಡೇ ಬಂದಿದ್ದಾರೆ. ಈಗ ಚುನಾವಣಾ ದಿನಾಂಕ ಪ್ರಕಟವಾಗಿರುವ ಕಾರಣ ವಿಜಯ್‌ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.