


ಪುತ್ತೂರು: ಗಾಣಿಗ ಸಮಾಜದಿಂದ ವಿಶ್ವದಲ್ಲಿಯೇ ಭಾರತದ ಹೆಸರು ಚಿರಸ್ಥಾಯಿಯಾಗಿದೆ ಎಂದು ಪ್ರಹ್ಲಾದ್ ದಾಮೋದರದಾಸ್ ಮೋದಿ ಅಭಿಪ್ರಾಯಪಟ್ಟರು. ದೇಶದಲ್ಲಿ ಗಾಣಿಗ ಸಮಾಜದ ಮಗನಿಂದ ದೊಡ್ಡ ಬದಲಾವಣೆ ಉಂಟಾಗಿದ್ದು, ಭ್ರಷ್ಟಾಚಾರ ನಿರ್ಮೂಲನೆಯಾಗಿದೆ. “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಮೂಲಕ ಭಾರತವನ್ನು ವಿಶ್ವವೇ ಗುರುತಿಸುವಂತಾಗಿದೆ. ನಾವು ಸಂಘಟಿತರಾದರೆ ರಾಜಕೀಯ ಪಕ್ಷಗಳೇ ನಮ್ಮ ಮನೆ ಬಾಗಿಲು ತಟ್ಟುತ್ತವೆ. ಆದರೆ ಪ್ರಸ್ತುತ ನಾವೇ ರಾಜಕೀಯ ಪಕ್ಷಗಳ ಬಾಗಿಲು ತಟ್ಟುವಂತಾಗಿದೆ ಎಂದು ಅವರು ಹೇಳಿದರು.
ಭಾನುವಾರ ಪುತ್ತೂರು ಸಾಲ್ಮರದ ಕೊಟೇಚಾ ಸಭಾಂಗಣದಲ್ಲಿ ನಡೆದ ಅಂತರ್ ಜಿಲ್ಲಾಮಟ್ಟದ ಗಾಣಿಗ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ದೇಶದಾದ್ಯಂತ 14 ಕೋಟಿ ಗಾಣಿಗ ಸಮಾಜದವರು ಇದ್ದರೂ ನಾವು ಸಂಘಟಿತರಾಗಿಲ್ಲ ಎಂಬುದು ಕಟು ಸತ್ಯ ಎಂದು ಹೇಳಿದರು.


ರಾಮಾಯಣದಿಂದ ಹಿಡಿದು ಸ್ವಾತಂತ್ರ್ಯ ಸಂಗ್ರಾಮದವರೆಗೆ ಗಾಣಿಗರ ಕೊಡುಗೆ ಇದ್ದು, ಇಂದು ನಮ್ಮ ಇತಿಹಾಸವನ್ನು ಮರೆತಿದ್ದೇವೆ. ಮೊಬೈಲ್ ಮೋಹಿತ ಬದುಕಿನಲ್ಲಿ ಸಂಸ್ಕಾರ ಕಡೆಗಣನೆಯಾಗುತ್ತಿದೆ. ಗಾಣಿಗ ಸಮಾಜದ ಹೆಸರು ವಿಶ್ವಮಾನ್ಯವಾಗಿದ್ದು, ಅದನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯುವಜನತೆ ಹೆಚ್ಚು ಉದ್ಯಮ ಕ್ಷೇತ್ರಕ್ಕೆ ಬರಬೇಕು. ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಂಕಲ್ಪ ಒಬ್ಬ ವ್ಯಕ್ತಿಯದ್ದಲ್ಲ, ಇಡೀ ದೇಶದ ಸಂಕಲ್ಪವಾಗಿದೆ. ಜಿಲ್ಲೆಯ ಸಂಸ್ಕೃತಿಗೆ ಅನುಗುಣವಾಗಿ ವಿಕಸಿತ ಭಾರತದತ್ತ ಹೆಜ್ಜೆ ಹಾಕಲು ಒಗ್ಗಟ್ಟು ಅಗತ್ಯ ಎಂದು ಹೇಳಿದರು.
