ಯು.ಆರ್ ಪ್ರಾಪರ್ಟಿಸ್‌ ಮಾಲಕ ಉಜ್ವಲ್ ಪ್ರಭು ಕೊಡುಗೆ, ನಿರ್ವಹಣೆ
ಸಹಾಯಕ ಆಯುಕ್ತರಿಂದ ಶಿಲಾನ್ಯಾಸ

oplus_268435456

ಪುತ್ತೂರು: ಪಕ್ಷಿ ಸಂಕುಲವನ್ನು ರಕ್ಷಿಸಿ, ಉಳಿಸುವ ನಿಟ್ಟಿನಲ್ಲಿ ಪುತ್ತೂರಿನ ತಾಲೂಕು ಆಡಳಿತ ಸೌಧದ ವತಿಯಿಂದ ‘ಪಕ್ಷಿಗಳ ಆಶ್ರಯದಾಮ’ ನಿರ್ಮಾಣವಾಗಲಿದೆ. ಆಡಳಿತ ಸೌಧದ ಹಿಂಭಾಗದಲ್ಲಿರುವ ಖಾಲಿ ಜಾಗದಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳ ಜೊತೆಗೆ ಪಕ್ಷಿಗಳ ಆಶ್ರಯದಾಮವು ನಿರ್ಮಾಣವಾಗಲಿದೆ. ಉದ್ಯಮಿ ಯು.ಆರ್ ಪ್ರಾಪರ್ಟಿಸ್‌ನ ಉಜ್ವಲ್‌ ಪ್ರಭು ಅವರು ಕೊಡುಗೆಯಾಗಿ ತಾಲೂಕು ಆಡಳಿತ ಸೌಧಕ್ಕೆ ಪಕ್ಷಿಗಳ ಆಶ್ರಯದಾಮ ನಿರ್ಮಿಸಿಕೊಡಲಿದ್ದಾರೆ.

ಸುಮಾರು 11 ಸೆಂಟ್ಸ್ ಜಾಗದಲ್ಲಿ ನಿರ್ಮಾಣವಾಗಲಿರುವ ಪಕ್ಷಿಗಳ ಆಶ್ರಯದಾಮದಲ್ಲಿ ಚಿಕ್ಕು, ಮಾವು, ರಾಂಬೂಟನ್, ಪೇರಳೆ, ಜಂಬೂ, ಕೋಕಮ್, ಗೇರು, ಕಸ್ಟರ್ಡ್ ಆಪಲ್ ಸೇರಿದಂತೆ ಸುಮಾರು 25 ಜಾತಿಯ ಹಣ್ಣಿನ ಗಿಡಗಳು, ಪಕ್ಷಿಗಳ ಬಾಯಾರಿಕೆ ನೀಗಿಸಲು ನೀರಿನ ಕೊಳ, ಹಕ್ಕಿಗಳಿಗೆ ಆಶ್ರಯಿಸಲು ಎರಡು ಗೂಡುಗಳು, ಸುತ್ತ ಆವರಣಗೋಡೆ, ಹೊರಭಾಗದಲ್ಲಿ ಇಂಟರ್‌ಲಾಕ್ ಅಳವಡಿಕೆ, ಹಣ್ಣಿನ ಗಿಡಗಳೊಗೆ ನೀರು ಹಾಯಿಸಲು ಡ್ರಿಪ್ ಸಿಸ್ಟಮ್‌ಗಳು ಬರಲಿದೆ.

ಪಕ್ಷಿಗಳ ಆಶ್ರಯದಾಮವನ್ನು ಯು.ಆರ್ ಪ್ರಾಪರ್ಟಿಸ್ ಸಂಸ್ಥೆಯವರು ಕೊಡುಗೆಯಾಗಿ ನಿರ್ಮಿಸಿಕೊಡಲಿದ್ದಾರೆ. ಜೊತೆಗೆ ಅದರ ನಿರ್ವಹಣೆಯನ್ನು ಯು.ಆ‌ರ್ ಪ್ರಾಪರ್ಟಿಸ್‌ ಸಂಸ್ಥೆಯೇ ಮಾಡಲಿದೆ.

ಪಕ್ಷಿಗಳ ಆಶ್ರಯದಾಮ ನಿರ್ಮಾಣಕ್ಕೆ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗಿಸ್ ತೆಂಗಿನಕಾಯಿ ಒಡೆದು ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಪಕ್ಷಿಗಳಿಗೆ ಆಶ್ರಯ ನೀಡುವ ಯು.ಆರ್.ಪ್ರಾಪರ್ಟಿಸ್‌ ಸೇವಾ ಕಾರ್ಯವನ್ನು ಪ್ರಶಂಸಿದರು. ಇದಕ್ಕೆ ಸಹಕರಿದ ಭೂ ದಾಖಲೆಗಳ ಇಲಾಖೆಯ ಪ್ರಮೋದ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಯು.ಆರ್ ಪ್ರಾಪರ್ಟಿಸ್ ಆಡಳಿತ ನಿರ್ದೇಶಕ ಉಜ್ವಲ್‌ ಪ್ರಭು ಮಾತನಾಡಿ, ಪರಿಸರ ಮತ್ತು ಪಕ್ಷಿಗಳ ಮೇಲೆ ವಿಶೇಷ ಕಾಳಜಿ ವಹಿಸಿರುವ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್, ಭೂ ದಾಖಲೆಗಳ ಇಲಾಖೆಯ ಪ್ರಮೋದ್‌ರವರಿಗೆ ಅಭಿನಂದನೆ ಸಲ್ಲಿಸಿದರು.

ಭೂಮಾಪಕ ನಿಸ್ಸಾರ್ ಪಾಷಾ ಉಪತಹಶೀಲ್ದಾರ್ ರವಿ ಪಿ.ಎಸ್,ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಪ್ರಮೋದ್ ಕುಮಾರ್,ಸಂದೇಶ ಮಯ್ಯ, ಸಂಜೀವ ಗೌಡ, ಇಂಜಿನೀಯ‌ರ್ ಸಜೇಶ್, ಸರ್ವೇಯರ್ ಪ್ರಜ್ವಲ್ ಸ.ವಿ, ವಿಕ್ಟರ್, ಸಂತೋಷ್‌, ಸಹಾಯಕ ಆಯುಕ್ತರ ಕಚೇರಿ ಸಿಬ್ಬಂದಿ ರಾಜೇಶ್, ಶ್ರೀಧರ ಮತ್ತು ಯು.ಆರ್ ಪ್ರಾಪರ್ಟಿಸ್‌ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.