ಮಂಗಳೂರು :ಮಂಗಳೂರಿನಲ್ಲಿ 80,000 ಟನ್ ಸಾಮರ್ಥ್ಯದ ಭೂಗತ ಎಲ್ಪಿಜಿ ಸಂಗ್ರಹಾಗಾರ ನಿರ್ಮಾಣ ಕಾಮಗಾರಿ ಹಾಗೂ ಸಿದ್ಧತಾ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಇದು ಭಾರತದ ಅತಿದೊಡ್ಡ ಭೂಗತ ಎಲ್ಪಿಜಿ ಸಂಗ್ರಹಾಗಾರವಾಗಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್​​ಗಾಗಿ ಎಂಇಐಎಲ್ ನಿರ್ಮಿಸಿರುವ ಈ ಸಂಗ್ರಹಾಗಾರವು ಇಂಧನ ಸುರಕ್ಷತೆ ಮತ್ತು ನಿರಂತರ ಪೂರೈಕೆಯನ್ನು ಖಾತರಿಪಡಿಸಲಿದೆ.

 ಭಾರತದ ಅತಿದೊಡ್ಡ ಭೂಗತ ಎಲ್​ಪಿಜಿ ಸಂಗ್ರಹಾಗಾರ ಮಂಗಳೂರಿನಲ್ಲಿಸಿದ್ಧಗೊಂಡಿದೆ. ಇದರೊಂದಿಗೆ, ದೇಶದ ಇಂಧನ ಮೂಲಸೌಕರ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ. ಸದ್ಯ, ವಿಶಾಖಪಟ್ಟಣದಲ್ಲಿರುವ 60 ಸಾವಿರ ಟನ್‌ ಸಂಗ್ರಹ ಸಾಮರ್ಥ್ಯದ ಎಲ್​ಪಿಜಿ ಸಂಗ್ರಹಾಗಾರ ಈವರೆಗೆ ದೇಶದ ಅತಿದೊಡ್ಡ ಸಂಗ್ರಹಾಗಾರವಾಗಿತ್ತು. ಇದೀಗ ಮಂಗಳೂರಿನಲ್ಲಿ ನಿರ್ಮಾಣವಾಗಿರುವ ಸಂಗ್ರಹಾಗಾರ 80,000 ಟನ್ ಸಂಗ್ರಹ ಸಾಮರ್ಥ್ಯ ಹೊಂದಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL)ಗಾಗಿ ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್​​ಫ್ರಾಸ್ಟ್ರಕ್ಚರ್ ಲಿಮಿಟೆಡ್ (MEIL) ಅಭಿವೃದ್ಧಿಪಡಿಸಿದ ಸಂಗ್ರಹಾಗಾರ ಇದಾಗಿದೆ.