

ಬೆಂಗಳೂರು (ಜ.10): ಎಸ್ಎಸ್ಎಲ್ಸಿ ಪರೀಕ್ಷೆ (SSLC Exam) ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದೆ. ಪರೀಕ್ಷೆ ಸಮೀಪ ಬರ್ತಿರುವ ವೇಳೆ ಕಿಡಿಗೇಡಿಗಳು ವಿದ್ಯಾರ್ಥಿಗಳ (Student) ಭವಿಷ್ಯದ ಜೊತೆ ಚೆಲ್ಲಾಟವಾಗುವ ಕೆಲಸ ಮಾಡ್ತಿದ್ದಾರೆ. ಪ್ರಶ್ನೆ ಪತ್ರಿಕೆಗಳನ್ನ (Question Papers) ಕೊಡ್ತಿದ್ದೇವೆ ಎಂದು ಇನ್ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರಂಗಳಲ್ಲಿ ಪ್ರಶ್ನೆ ಪತ್ರಿಕೆ ಹರಿಬಿಟ್ಟು ಮೋಸದ ಜಾಲ ರೂಪಿಸಿದ್ದಾರೆ. 30 ರೂಪಾಯಿಗೆ ಪ್ರಶ್ನೆ ಪತ್ರಿಕೆ ನೀಡೋದಾಗಿ ವಂಚಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

INSTAGRAM ಅಲ್ಲಿ 30 ರೂಪಾಯಿಗೆ SSLC ಪ್ರಶ್ನೆ ಪತ್ರಿಕೆ ಲೀಕ್ ಮಾಡಲಾಗ್ತಿದೆ. ಪ್ರಮೋಷನ್ ವಿಡಿಯೋ ರೀತಿ ಪ್ರಶ್ನೆ ಪತ್ರಿಕೆಗಳನ್ನ ಬಿಡುಗಡೆ ಮಾಡಲಾಗ್ತಿದೆ ಎಂದು ತಿಳಿದು ಬಂದಿದೆ. ಮೊನ್ನೆ ಪಿಯು ಪರೀಕ್ಷೆ ಪ್ರಶ್ನೆ ಪತ್ರಿಕೆ ಈಗ SSLC ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಆಗ್ತಿದ್ದು, ಶಿಕ್ಷಣ ಇಲಾಖೆ ಏನ್ ಮಾಡ್ತಿದೆ ಎಂದು ಜನರು ಪ್ರಶ್ನೆ ಮಾಡ್ತಿದ್ದಾರೆ.


ಲೀಕಾಸುರರ ವಿರುದ್ಧ ಕ್ರಮ ಯಾಕಿಲ್ಲ?
DM ಮಾಡಿ ಪ್ರಶ್ನೆ ಪತ್ರಿಕೆ ತಗೊಳ್ಳಿ ಅಂತ ಓಪನ್ ಆಗಿಯೇ ಪೋಸ್ಟ್ಗಳು ಹರಿದಾಡ್ತಿದ್ದು, ಲೀಕಾಸುರರ ವಿರುದ್ಧ ಕ್ರಮ ಯಾಕಿಲ್ಲ ಎಂಬ ಪ್ರಶ್ನೆ ಮೂಡಿದೆ. ಪೂರ್ವ ಸಿದ್ಧತಾ ಪರೀಕ್ಷೆ ಆರಂಭ ಆಗುವ ಮುನ್ನ ಬೆಳಿಗ್ಗೆ 8.15ಕ್ಕೆ ಪ್ರಶ್ನೆ ಪತ್ರಿಕೆ ಲೀಕ್ ಮಾಡ್ತಿದ್ದು, ಶಿಕ್ಷಣ ಇಲಾಖೆಯ ಪ್ರಿಪರೇಟರಿ ಪರೀಕ್ಷೆ ಪರಿಕಲ್ಪನೆಗೆ ಈಗ ಮಾನ್ಯತೆ ಇಲ್ಲದಂತಾಗಿದೆ.
ವಿಫಲವಾಗ್ತಿದ್ಯಾ ಶಿಕ್ಷಣ ಇಲಾಖೆ?
ವರ್ಷವಿಡೀ ಶ್ರಮ ಪಟ್ಟು ಓದುವ ವಿದ್ಯಾರ್ಥಿಗಳಿಗೆ ಮಕ್ಕಳಿಗೆ ಮೋಸವಾಗ್ತಿದೆ ಎಂದು ಪೋಷಕರು ಆಕ್ರೋಶ ಹೊರಹಾಕ್ತಿದ್ದಾರೆ. ಲೀಕಾಸುರರ ಮಟ್ಟ ಹಾಕುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದ್ದು, ಈ ರೀತಿ ಆದ್ರೆ ಪೂರ್ವ ಸಿದ್ಥತಾ ಪರೀಕ್ಷೆಗಳನ್ನ ಮಾಡಿ ಏನು ಪ್ರಯೋಜನ ಎಂದು ಜನರು ಕೇಳ್ತಿದ್ದಾರೆ.
KSEAB ಸ್ಪಷ್ಟನೆ ಏನು?
ಈ ಕುರಿತು ಸೈಬರ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇವೆ ಎಂದು KSEAB ಸ್ಪಷ್ಟನೆ ನೀಡಿದೆ. ಐದು ಪ್ರಶ್ನೆ ಪತ್ರಿಕೆ ಲೀಕ್ ಆಗಿಲ್ಲ ಎರಡು ಪ್ರಶ್ನೆ ಪತ್ರಿಕೆ ಲೀಕ್ ಆಗಿರಬಹುದು. ಇದಕ್ಕೆ ಸಂಬಂಧಪಟ್ಟಂತೆ ಪೊಲೀಸರು ಲೀಕ್ ಮಾಡಿದವರನ್ನ ಕಂಡು ಹಿಡಿಯುವ ಪ್ರಯತ್ನ ಮಾಡ್ತಾ ಇದ್ದಾರೆ ಎಂದಿದ್ದಾರೆ.
ಪ್ರಕರಣದ FIRನಲ್ಲಿ ಏನಿದೆ?
ಹಣ ಮಾಡುವ ಉದ್ದೇಶದಿಂದ ಪರೀಕ್ಷಾ ಅಕ್ರಮ ಎಸಗಲು ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ಆಸಾಮಿ ಪತ್ತೆ ಮಾಡಬೇಕು ಅಂತ FIR ಅಲ್ಲಿ ಉಲ್ಲೇಖ ಮಾಡಲಾಗಿದೆ. ಈ ಸಂಬಂಧ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿಗಳ ಮೇಲೆ ಎಫೆಕ್ಟ್
ಪ್ರಶ್ನೆ ಪತ್ರಿಕೆ ಕಾಪಿ ಕಳುಹಿಸುವಂತೆ ವಿದ್ಯಾರ್ಥಿಗಳು ಅಂಗಲಾಚುತ್ತಿದ್ದಾರೆ. ಪ್ರಿಪರೇಟರಿ ಪ್ರಶ್ನೆ ಪತ್ರಿಕೆಗೆ ಇಷ್ಟು ರಿಕ್ವೆಸ್ಟ್ ಮಾಡಿದ್ರೆ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣ ಆಗ್ತಾರ? ಈ ವರ್ಷವು ವಾರ್ಷಿಕ ಫಲಿತಾಂಶದ ಮೇಲೆ ಎಫೆಕ್ಟ್ ಬೀಳೋ ಸಾಧ್ಯತೆ ಇದೆ. ಫಾಲೋವರ್ಸ್ ಹೆಚ್ಚಳ ಮಾಡೋದಕ್ಕೆ ಕೂಡ ಪ್ರಶ್ನೆ ಪತ್ರಿಕೆ ಲೀಕ್ ಮಾಡ್ತಾ ಇದ್ದಾರೆ ಎನ್ನಲಾಗ್ತಿದೆ.
