Screenshot

ಮಹಿಳಾ ಪ್ರೀಮಿಯರ್ ಲೀಗ್ ನಾಲ್ಕನೇ ಆವೃತ್ತಿ ಮುಂದಿನ ವರ್ಷ ಅಂದರೆ 2026 ರ ಜನವರಿ 9 ರಿಂದ ಆರಂಭವಾಗಲಿದೆ. ಈ ಆವೃತ್ತಿಯ ಉದ್ಘಾಟನಾ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಡುವೆ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ದೊಡ್ಡ ಆಘಾತ ಎದುರಾಗಿದೆ.

ತಂಡದ ಚಾಂಪಿಯನ್ ಆಟಗಾರ್ತಿ ಆಸ್ಟ್ರೇಲಿಯಾದ ಸ್ಟಾ‌ರ್ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಮುಂದಿನ ಆವೃತ್ತಿಯ ಡಬ್ಲ್ಯುಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಮುಂದಿನ ಆವೃತ್ತಿಯ ಡಬ್ಲ್ಯುಪಿಎಲ್‌ನಿಂದ ಹಿಂದೆ ಸರಿಯುತ್ತಿರುವುದಾಗಿ ಪೆರ್ರಿ ತಿಳಿಸಿದ್ದಾರೆ. ಪೆರ್ರಿ ಅವರ ಈ ನಿರ್ಧಾರ ಆರ್‌ಸಿಬಿಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ.

ಪೆರ್ರಿ ಬದಲಿಯಾಗಿ ಆಲ್‌ರೌಂಡರ್ ಎಂಟ್ರಿ:

ವಾಸ್ತವವಾಗಿಮಿನಿ ಹರಾಜಿಗೂ ಮುನ್ನವೇ ಆರ್‌ಸಿಬಿ ಎಲ್ಲಿಸ್ ಪೆರ್ರಿ ಅವರನ್ನು 2 ಕೋಟಿ ರೂ. ಬೆಲೆಗೆ ತಂಡದಲ್ಲೇ ಉಳಿಸಿಕೊಂಡಿತ್ತು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಪೆರ್ರಿ ಈ ಆವೃತ್ತಿಯಲ್ಲಿ ಆಡುತ್ತಿಲ್ಲ. ಎಲ್ಲಿಸ್ ಪೆರ್ರಿ ತಂಡದಿಂದ ಹಿಂದೆ ಸರಿದ ನಂತರ, ಆರ್‌ಸಿಬಿ ಈಗ ಅವರ ಬದಲಿ ಆಟಗಾರ್ತಿಯನ್ನು ಘೋಷಿಸಿದೆ. 25 ವರ್ಷದ ಆಲ್‌ರೌಂಡ‌ರ್ ಸಯಾಲಿ ಸತ್‌ಘರೆ ಅವರನ್ನು ಆರ್‌ಸಿಬಿ ಬದಲಿಯಾಗಿ ಸೇರಿಸಿಕೊಳ್ಳಲಾಗಿದೆ. ಈ ಆಟಗಾರ್ತಿ ಭಾರತ ಪರ ಮೂರು ಏಕದಿನ ಪಂದ್ಯಗಳನ್ನು ಆಡಿದ್ದು, ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ.

ಈ ಹಿಂದೆ ಗುಜರಾತ್ ಜೈಂಟ್ಸ್ ತಂಡದ ಪರ ನಾಲ್ಕು ಪಂದ್ಯಗಳನ್ನು ಆಡಿರುವ ಸತ್‌ಘರೆ ಎರಡು ಇನ್ನಿಂಗ್ಸ್‌ಗಳಲ್ಲಿ ಒಂದು ವಿಕೆಟ್ ಪಡೆದು 20 ರನ್ ಗಳಿಸಿದ್ದಾರೆ. ಈ ಆವೃತ್ತಿಯಲ್ಲಿ ಸಯಾಲಿ ಅವರನ್ನು ಯಾವುದೇ ತಂಡವು ಖರೀದಿಸಿರಲಿಲ್ಲ. ಆದರೆ ಎಲೀಸ್ ಪೆರ್ರಿ ಗಾಯಗೊಂಡ ನಂತರ, ಅವರು ಈಗ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.