ನವದೆಹಲಿ, ಅಕ್ಟೋಬರ್ 01: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಮಾನೋತ್ಸವ ಸಂಭ್ರಮದಲ್ಲಿದೆ. ಸಂಘಟನೆಯನ್ನು ಭಾರತದ ಪ್ರತಿಯೊಂದು ಅಂಶದ ಮೇಲೆ ಪ್ರಭಾವ ಬೀರಿದ ಶಾಶ್ವತ ರಾಷ್ಟ್ರೀಯ ಪ್ರಜ್ಞೆಯ “ಸದ್ಗುಣಶೀಲ ಅವತಾರ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ. ಇದೇ ವೇಳೆ 100 ರೂಪಾಯಿಯ ನಾಣ್ಯವನ್ನು ಪ್ರಧಾನಿ ಬಿಡುಗಡೆ ಮಾಡಿದರು.

ನಾಗ್ಪುರದಲ್ಲಿ 1925ರಲ್ಲಿ ಡಾ. ಕೇಶವ್ ಬಲಿರಾಮ್ ಹೆಡ್ಗೆವಾರ್ ಸ್ಥಾಪಿಸಿದ ಆರ್‌ಎಸ್‌ಎಸ್, ಸಾಂಸ್ಕೃತಿಕ ಅರಿವು, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಉತ್ತೇಜಿಸುವ ಸ್ವಯಂಸೇವಕ ಆಧಾರಿತ ಸಂಘಟನೆಯಾಗಿ ಆರಂಭಗೊಂಡಿತು. ಕಳೆದ ಒಂದು ಶತಮಾನದಲ್ಲಿ ಇದು ಭಾರತದ ಅತ್ಯಂತ ಪ್ರಭಾವಶಾಲಿ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳಲ್ಲಿ ಒಂದಾಗಿ ಬೆಳೆದಿದ್ದು, 100 ವರ್ಷ ಪೂರೈಸಿದೆ.

ಇಂದು ಬುಧವಾರ (ಅಕ್ಟೋಬರ್ 1) ರಾಷ್ಟ್ರ ರಾಜಧಾನಿ ದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ ಮುಖ್ಯ ಪಾಲ್ಗೊಂಡರು. ಈ ಸಂದರ್ಭದಲ್ಲಿ ವಿಶೇಷ ಅಂಚೆ ಚೀಟಿ ಮತ್ತು ₹100 ನಾಣ್ಯವನ್ನು ಬಿಡುಗಡೆ ಮಾಡಲಾಯಿತು. ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ವಿಶೇಷ ಲಾಂಛನ ಹೊಂದಿರುವ ನಾಣ್ಯ ಬಿಡುಗಡೆ ಆಗಿದೆ.

ಮಂಗಳವಾರ 93ನೇ ವಯಸ್ಸಿನಲ್ಲಿ ನಿಧನರಾದ ಹಿರಿಯ ಬಿಜೆಪಿ ನಾಯಕ ವಿಜಯ್ ಕುಮಾರ್ ಮಲ್ಹೋತ್ರಾ ಹಾಗೂ ಸಂಸ್ಥಾಪಕ ಹೆಡ್ಗೆವಾರ್ ಅವರಿಗೆ ಗೌರವ ಸಲ್ಲಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ಮಾತು ಆರಂಭಿಸಿದರು. ಮೋದಿ ಅವರು, ವಿಜಯದಶಮಿಯು ಕೆಟ್ಟದಿನ ಮೇಲೆ ಒಳ್ಳೆಯತನ, ಅನ್ಯಾಯದ ಮೇಲೆ ನ್ಯಾಯ, ಸುಳ್ಳಿನ ಮೇಲೆ ಸತ್ಯ ಮತ್ತು ಕತ್ತಲೆಯ ಮೇಲೆ ಬೆಳಕಿನ ಜಯದ ಘೋಷಣೆ ಆಗಿದೆ. ಆರ್‌ಎಸ್‌ಎಸ್ ಸ್ಥಾಪನೆ 100 ವರ್ಷಗಳ ಹಿಂದೆ ಕಾಕತಾಳೀಯವಲ್ಲ. ಸಂಘವು ನಮ್ಮ ಶಾಶ್ವತ ರಾಷ್ಟ್ರೀಯ ಪ್ರಜ್ಞೆಯ ಸದ್ಗುಣ ಅವತಾರವಾಗಿದೆ ಎಂದು ಹೇಳಿದರು.