


ಚಿತ್ರದುರ್ಗ: ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಗಣೇಶನ ಶೋಭಾಯಾತ್ರೆ ಇಂದು ಚಿತ್ರದುರ್ಗದಲ್ಲಿ ನಡೆದಿದ್ದು, ಶೋಭಾಯಾತ್ರೆಗೆ ಜನಸಾಗರವೇ ಹರಿದುಬಂದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಜನರು ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು, ಡಿಜೆ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿ ಎಂಜಾಯ್ ಮಾಡಿದರು.
ಇಂದು ಏಷ್ಯಾದಲ್ಲಿಯೇ ಅತಿ ಪ್ರಸಿದ್ಧಿಯಾದ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆ ಅದ್ಧೂರಿಯಾಗಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಜರುಗಿತು. ಬೆಳಗ್ಗೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಶೋಭಾಯಾತ್ರೆಗೆ ವಿದ್ಯುಕ್ತ ಚಾಲನೆ ದೊರಕಿತು. ಬಳಿಕ ಶುರುವಾದ ಬೃಹತ್ ಶೋಭಾಯಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದು ಬಂದಿತು. ಅದರಲ್ಲಂತೂ ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಯುವಕರು ರಸ್ತೆಯುದ್ದಕ್ಕೂ ಜೈ ಶ್ರೀರಾಮ್, ಜೈ ಭಜರಂಗಿ ಎಂದು ಘೋಷ ವಾಕ್ಯ ಕೂಗುವ ಮೂಲಕ ಭರ್ಜರಿ ಸ್ಟೆಪ್ ಹಾಕಿದರು. ಪ್ರತೀ ವರ್ಷದಂತೆಯೇ ಈ ವರ್ಷವೂ ಅದ್ಧೂರಿ ಶೋಭಾಯಾತ್ರೆ ನಡೆಯುತ್ತಿದ್ದು, ನೆಂಟರಿಷ್ಟರು ವಿವಿದೆಡೆಗಳಿಂದ ಆಗಮಿಸಿ ನಮ್ಮ ಜಿಲ್ಲೆಯಲ್ಲಿ ಐತಿಹಾಸಿಕ ಉತ್ಸವದಲ್ಲಿ ಭಾಗಿಯಾಗೋದು ನಮಗೆ ಹೆಮ್ಮೆ ಅಂತಾರೆ ಸ್ಥಳೀಯರು.


ಇನ್ನು ಜೈನ ಧಾಮದ ಸಿಂಧೂರ ಮಟಂಪದ ಬಳಿಯಿಂದ ಹೊರಟ ಬೃಹತ್ ಮೆರವಣಿಗೆ ಮದಕರಿ ವೃತ್ತ, ಗಾಂಧಿ ಸರ್ಕಲ್, ಕನಕ ಸರ್ಕಲ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಇನ್ನೂ ಸರಿ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಜನರು ಶೋಭಾಯಾತ್ರೆಯಲ್ಲಿ ಸೇರಿರುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನೋಡಲು ಎರಡು ಕಣ್ಣು ಸಾಲದು.
ಇನ್ನೂ ಶೋಭಾಯಾತ್ರೆ ಉದ್ಘಾಟನೆ ವೇಳೆ ಮಾತನಾಡಿದ ಮಾದಾರ ಚನ್ನಯ್ಯ ಶ್ರೀಗಳು, 3 ದಿನದಿಂದ ಉತ್ಸವಕ್ಕೆ ಏನೆಲ್ಲ ಅಡಚಣೆ ಆಯಿತು ನಿಮಗೂ ಗೊತ್ತಿದೆ. ಈ ಹಿಂದೂ ಮಹಾಗಣಪತಿಗೆ ಒಂದು ಶಕ್ತಿ ಇದೆ. ಏನೇ ಅಡಚಣೆ ಆದರೂ ಅದೆಲ್ಲವೂ ನಿವಾರಣೆ ಆಗಲಿದೆ ಈ ಮಾತಿಗೆ ಶೋಭಾಯಾತ್ರೆಗೆ ಸೇರಿದ ಲಕ್ಷಾಂತರ ಜನರೇ ಸಾಕ್ಷಿ. ಈ ಉತ್ಸವ ಮಧ್ಯ ಕರ್ನಾಟಕದ ಪ್ರಸಿದ್ದ ಉತ್ಸವ, ಈ ಉತ್ಸವಕ್ಕೆ ಅಧಿಕಾರಿಗಳು ಸಹಕರಿಸಲಿ ಎಂದರು.
