ಹೊಸದಿಗಂತ ವರದಿ ಚಿಕ್ಕಮಗಳೂರು:
ತಾಲ್ಲೂಕಿನ ಗಿರಿ ತಪ್ಪಲಿನಲ್ಲಿ ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ಕೈಮರ ಸಮೀಪ ಬೃಹತ್ ಮರವೊಂದು ರಸ್ತೆಗೆ ಉರುಳಿಬಿದ್ದ ಪರಿಣಾಮ ಮುಳ್ಳಯ್ಯನ ಗಿರಿ, ದತ್ತಪೀಠದ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಇಂದು ನಸುಕಿನಲ್ಲೇ ಮರ ಬಿದ್ದಿರುವ ಪರಿಣಾಮ ಗಿರಿ ಭಾಗದ ಹಲವು ಗ್ರಾಮಗಳ ಜನರು ಕೆಲಸ, ಕಾರ್ಯಗಳಿಗೆ ನಗರಕ್ಕಾಗಮಿಸಲು ತೊಡಕಾಗಿದೆ. ಬಹುತೇಕ ಮಂದಿ ಹಿರೇಕೊಳಲೆ ಬಳಸಿಕೊಂಡು ನಗರಕ್ಕಾಗಮಿಸುತ್ತಿದ್ದಾರೆ. ತೋಟ ಕಾರ್ಮಿಕರು, ಜನಸಾಮಾನ್ಯರು ವಾಹನ ಸಂಚಾರವಿಲ್ಲದೆ ಪರದಾಡುತ್ತಿದ್ದು, ಅರಣ್ಯ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯರು ಮರ ತೆರವಿಗೆ ಶ್ರಮಿಸುತ್ತಿದ್ದಾರೆ.
ರಾತ್ರಿಯಿಡೀ ಎಡಬಿಡದೆ ಸುರಿದ ಮಳೆ ಹಾಗೂ ಗಾಳಿಯಿಂದಾಗಿ ಇಂದು ಬೆಳಗಿನ ಜಾವ ಮರ ಉರುಳಿಬಿದ್ದಿದ್ದು, ಮೇಗೂರಿನಿಂದ ಕೊಗ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್‌ ಆಗಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಜಯಪುರ ಪೊಲೀಸರು ಭೇಟಿನೀಡಿದ್ದಾರೆ.