

ಪುತ್ತೂರು: ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರಿಗೆ 48 ಗಂಟೆಯೊಳಗೆ ಪರಿಹಾರ ನೀಡುವುದಾಗಿ ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ. ಪರಿಹಾರ ಕೊಡುವ ಭರವಸೆ ಮಾತಿಗೆ ಮಾತ್ರವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಈ ಪರಿಸರದಲ್ಲಿ ಈವರೆಗೆ ಕಂಡು ಕೇಳರಿಯದಷ್ಟು ಹಾನಿ ಸಂಭವಿಸಿತ್ತು. ಈ ಬಾರಿಯ ಪ್ರಾಕೃತಿಕ ವಿಕೋಪಕ್ಕೆ ಇಲ್ಲಿನ ಜನರು ಬೆಚ್ಚಿ ಬಿದ್ದಿದ್ದರು. ತಕ್ಷಣ ಸ್ಪಂದಿಸಿದ್ದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಪರಿಹಾರ ಕೊಡುವ ಭರವಸೆ ನೀಡಿದ್ದರು. ಆದರೆ ಭರವಸೆ ಇನ್ನೂ ಈಡೇರಿಲ್ಲ.
ಕೋಡಿಂಬಾಡಿ ಗ್ರಾಮ ಪಂಚಾಯತ್ ವತಿಯಿಂದ 5 ಲಕ್ಷಕ್ಕೂ ಮಿಕ್ಕಿದ ಹಣದಲ್ಲಿ ದುರಸ್ತಿ ಕೆಲಸ ಮಾಡಲಾಗಿದೆ.
ಪಂಚಾಯತ್ ನಲ್ಲಿ ಅಷ್ಟು ಹಣ ಇಲ್ಲದಿದ್ದರೂ ಪರ್ಯಾಯ ವ್ಯವಸ್ಥೆ ಮಾಡಿ ಸ್ಪಂದಿಸಲಾಗಿದೆ. ಆದರೆ ಜಿಲ್ಲಾಡಳಿತ ಅಥವಾ ತಾಲೂಕು ಆಡಳಿತ ಇನ್ನೂ ಈ ಬಗ್ಗೆ ಗಮನ ಕೊಟ್ಟಿಲ್ಲ. ಇನ್ನು ಕೂಡ ಯಾವುದೇ ಪರಿಹಾರ ಹಣ ಬಿಡುಗಡೆ ಆಗಿಲ್ಲ.
ಶಾಸಕರು 48 ಗಂಟೆಗಳಲ್ಲಿ ಪರಿಹಾರ ನೀಡುವ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದ್ದರೂ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.


ಕಳೆದ 20 ದಿನಗಳ ಹಿಂದೆ ಉಂಟಾದ ಪ್ರಾಕೃತಿಕ ವಿಕೋಪದಿಂದ ಪುತ್ತೂರು ತಾಲೂಕಿನ ಹಲವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಹುತೇಕ ಮಾರ್ಗ, ಮನೆ ಮತ್ತು ತೋಟಗಳು ಹಾನಿಗೀಡಾಗಿತ್ತು. ಈ ವೇಳೆ ಘಟನಾ ಸ್ಥಳಗಳಿಗೆ ಭೇಟಿ ನೀಡಿದ್ದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು 48 ಗಂಟೆಯೊಳಗೆ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಭರವಸೆ ಇನ್ನೂ ಈಡೇರಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮಗಳಲ್ಲಿ ರಸ್ತೆ, ಮನೆ ಮತ್ತು ತೋಟಗಳಿಗೆ ಹಾನಿಯಾಗಿತ್ತು.
