

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ವಠಾರದಲ್ಲಿರುವ ಅಯ್ಯಪ್ಪ ಗುಡಿ, ನವಗ್ರಹ ಗುಡಿ, ನಾಗನ ಸಾನಿಧ್ಯವನ್ನು ಸ್ಥಳಾಂತರಗೊಳಿಸುವ ಬಗ್ಗೆ ದೈವಜ್ಞರ ಮೂಲಕ ಪ್ರಶ್ನಾಚಿಂತನೆ ಇರಿಸಿ ಆ ಪ್ರಕಾರ ತೀರ್ಮಾನ ಕೈಗೊಳ್ಳಲು ಶನಿವಾರ ಸಂಜೆ ನಡೆದ ದೇವಸ್ಥಾನದ ಕುರಿತ ಅಭಿವೃದ್ಧಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಅಯ್ಯಪ್ಪ ಗುಡಿ ಇರುವ ಸ್ಥಳದಲ್ಲಿ ರಥ ನಿಲುಗಡೆ ಆಗಬೇಕು ಅನ್ನುವ ಅಂಶ ಕಂಡು ಬಂದಿದೆ. ಜತೆಗೆ ಅಲ್ಲಿರುವ ನಾಗನ ಸಾನಿಧ್ಯವನ್ನು ದೇವಾಲಯದ ಗದ್ದೆಯಲ್ಲಿರುವ ಮೂಲ ನಾಗನ ಸಾನಿಧ್ಯಕ್ಕೆ ಸ್ಥಳಾಂತರಿಸುವಿಕೆಯ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ಅದರಂತೆ ತೀರ್ಮಾನಿಸಲಾಯಿತು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ದೇವಾಲಯದ ಬ್ರಹ್ಮಕಲಶಕ್ಕೆ ಸಮಯ ಬಂದಿದ್ದು ಅದಕ್ಕಿಂತ ಮೊದಲು ಮಾಸ್ಟರ್ ಪ್ಲಾನ್ ಕಾರ್ಯಗತ ಆಗಬೇಕು. ಎರಡು ವರ್ಷದೊಳಗೆ ಬ್ರಹ್ಮಕಲಶಕ್ಕೆ ಅಣಿಯಾಗಲು ಜೀರ್ಣೋದ್ಧಾರಕ್ಕೆ ಪೂರಕವಾಗಿ 20 ಜನರ ಸಮಿತಿ ಮಾಡಿದ್ದು, ಅದು ಧಾರ್ಮಿಕ ದತ್ತಿ ಇಲಾಖೆಯಲ್ಲಿ ಇದೆ. ಆ ಪಟ್ಟಿಯನ್ನು ಅಂತಿಮಗೊಳಿಸಿ ಸಮಿತಿ ಸದಸ್ಯರ ಮನೆಗೆ ಪಟ್ಟಿ ರವಾನೆ ಆಗಬೇಕು. ಇದು ದೇವಾಲಯದ ವ್ಯವಸ್ಥಾಪನ ಸಮಿತಿ ತಕ್ಷಣ ಮಾಡಬೇಕಾದ ಕೆಲಸ. ಜುಲೈ 6 ರಂದು ಜೀರ್ಣೋದ್ಧಾರ ಸಮಿತಿ ಸಭೆಯನ್ನು ಕರೆಯಬೇಕು. ಜೀರ್ಣೋದ್ಧಾರ ಕಾರ್ಯಕ್ಕಾಗಿ 20 ಕೋ.ರೂ.ಹಣ ಸಂಗ್ರಹಿಸುವ ಅಗತ್ಯ ಇದೆ ಎಂದರು.
