ನವದೆಹಲಿ: ಐತಿಹಾಸಿಕ ಬಾಹ್ಯಾಕಾಶ ಯಾನ ಪೂರೈಸಿ ಭೂಮಿಗೆ ವಾಪಸ್‌ ಆದ ಗಗನಯಾತ್ರಿ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸ್ವಾಗತ ಕೋರಿದ್ದಾರೆ.

ಶುಕ್ಲಾ ಅವರ ಪ್ರಯಾಣವು ಶತಕೋಟಿ ಕನಸುಗಳಿಗೆ ಸ್ಫೂರ್ತಿ. ಇದು ಭಾರತದ ಮಾನವ ಬಾಹ್ಯಾಕಾಶ ಹಾರಾಟದ ಮಿಷನ್ ಗಗನಯಾನಕ್ಕೆ ಒಂದು ಮೈಲಿಗಲ್ಲು ಎಂದು ಮೋದಿ ಬಣ್ಣಿಸಿದ್ದಾರೆ. 

ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ತಮ್ಮ ಐತಿಹಾಸಿಕ ಬಾಹ್ಯಾಕಾಶ ಕಾರ್ಯಾಚರಣೆಯಿಂದ ಭೂಮಿಗೆ ಮರಳುತ್ತಿರುವುದನ್ನು ಸ್ವಾಗತಿಸಲು ನಾನು ರಾಷ್ಟ್ರದೊಂದಿಗೆ ಸೇರುತ್ತೇನೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಭಾರತದ ಮೊದಲ ಗಗನಯಾತ್ರಿಯಾಗಿ, ಅವರು ತಮ್ಮ ಸಮರ್ಪಣೆ, ಧೈರ್ಯ ಮತ್ತು ಪ್ರವರ್ತಕ ಮನೋಭಾವದ ಮೂಲಕ ಶತಕೋಟಿ ಕನಸುಗಳಿಗೆ ಸ್ಫೂರ್ತಿ ನೀಡಿದ್ದಾರೆ. ಇದು ನಮ್ಮದೇ ಆದ ಮಾನವ ಬಾಹ್ಯಾಕಾಶ ಹಾರಾಟ ಮಿಷನ್- ಗಗನಯಾನಕ್ಕೆ ಮತ್ತೊಂದು ಮೈಲಿಗಲ್ಲು ಎಂದು ಪ್ರಧಾನಿ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

2025 ರ ಜೂ.26 ರಂದು ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಆಕ್ಸ್-4 (Axiom-4 mission) ಕಾರ್ಯಾಚರಣೆಯು, ಆರು ಮಿಲಿಯನ್ ಮೈಲುಗಳಿಗಿಂತ ಹೆಚ್ಚು ಪ್ರಯಾಣಿಸಿದೆ. ಭೂಮಿಯ ಸುತ್ತ 250 ಕ್ಕೂ ಹೆಚ್ಚು ಕಕ್ಷೆಗಳನ್ನು ಪೂರ್ಣಗೊಳಿಸಿದೆ.