ಚೆನ್ನೈನಿಂದ ಬೆಂಗಳೂರಿಗೆ ಇಂಧನ ಸಾಗಿಸುತ್ತಿದ್ದ ರೈಲು ತಿರುವಳ್ಳೂರು ರೈಲು ನಿಲ್ದಾಣದ ಬಳಿ ಬೆಂಕಿ ತಗುಲಿದ್ದು, ರೈಲು ಸಂಚಾರದಲ್ಲಿ ಅಡಚಣೆಯಾಗಿದೆ. ವಂದೇ ಭಾರತ್ ಸೇರಿ 29 ರೈಲುಗಳ ಸಂಚಾರ ರದ್ದುಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ತಿರುವಳ್ಳೂರು: ಇಂಧನ ಸಾಗಿಸುತ್ತಿದ್ದ ರೈಲ್ವೆ ಗೂಡ್ಸ್ ಟ್ಯಾಂಕರ್‌ವೊಂದಕ್ಕೆ ಇಂದು ಬೆಳಿಗ್ಗೆ ತಿರುವಳ್ಳೂರು ರೈಲು ನಿಲ್ದಾಣದ ಬಳಿ ಬೆಂಕಿ ತಗುಲಿದೆ. ಈ ಘಟನೆ ರೈಲು ಸಂಚಾರದಲ್ಲಿ ಭಾರೀ ಅಡಚಣೆಯನ್ನುಂಟು ಮಾಡಿದ್ದು, ಕಚೇರಿ ವ್ಯವಹಾರಗಳು, ವ್ಯಾಪಾರೋದ್ಯಮ ಹಾಗೂ ಸಾಮಾನ್ಯ ಜನರು ಪರದಾಡುತ್ತಿದ್ದಾರೆ.

ಚೆನ್ನೈನಿಂದ ಬೆಂಗಳೂರಿಗೆ ಇಂಧನವನ್ನು ಸಾಗಿಸುತ್ತಿದ್ದ ರೈಲು ಈ ಅಪಘಾತಕ್ಕೆ ಒಳಗಾಗಿದೆ. ಬೆಳಿಗ್ಗೆ ಜಾವ ಈ ಘಟನೆ ಬೆಳಕಿಗೆ ಬಂದಿದ್ದು, ಟ್ಯಾಂಕರ್‌ಗೂ ರೈಲು ಹಳಿಗಳಿಗೂ ದಟ್ಟ ಹೊಗೆ ಹರಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಸ್ಥಳಕ್ಕೆ ತಕ್ಷಣವೇ ರೈಲ್ವೆ ಅಧಿಕಾರಿಗಳು, ಅಗ್ನಿಶಾಮಕ ಮತ್ತು ತುರ್ತು ರಕ್ಷಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. 

ಬೆಂಕಿಯ ಮೂಲ ಕಾರಣ ಇನ್ನೂ ಸ್ಪಷ್ಟವಾಗಿಲ್ಲವಾದರೂ, ಭದ್ರತಾ ಕ್ರಮವಾಗಿ ದಕ್ಷಿಣ ರೈಲ್ವೆ ಕೆಲ ಪ್ರಮುಖ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.