

ಇಂಗ್ಲೆಂಡ್ ವಿರುದ್ಧ ಯೂತ್ ಒಡಿಐ ಸರಣಿಯಲ್ಲಿ ಟೀಮ್ ಇಂಡಿಯಾದ ಯುವ ದಾಂಡಿಗ ವೈಭವ್ ಸೂರ್ಯವಂಶಿ ಅಕ್ಷರಶಃ ಅಬ್ಬರಿಸಿದ್ದಾರೆ. ಈ ಅಬ್ಬರದೊಂದಿಗೆ 5 ಪಂದ್ಯಗಳಲ್ಲಿ ವೈಭವ್ ಬಾರಿಸಿದ ಸಿಕ್ಸರ್ಗಳ ಸಂಖ್ಯೆ ಬರೋಬ್ಬರಿ 29, ಹಾಗೆಯೇ 30 ಫೋರ್ಗಳನ್ನು ಸಹ ಸಿಡಿಸಿದ್ದಾರೆ. ಈ ಮೂಲಕ 5 ಇನಿಂಗ್ಸ್ಗಳಿಂದ ಕಲೆಹಾಕಿದ್ದು 355 ರನ್ಗಳು. ಈ ರನ್ ರಾಶಿಯೊಂದಿಗೆ ವೈಭವ್ ಸೂರ್ಯವಂಶಿ ವಿಶೇಷ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಈ ಸರಣಿಯಲ್ಲಿ ಮೊದಲ ಮ್ಯಾಚ್ನಲ್ಲಿ ವೈಭವ್ ಸೂರ್ಯವಂಶಿ 19 ಎಸೆತಗಳಲ್ಲಿ 48 ರನ್ ಬಾರಿಸಿದ್ದರು. ಇನ್ನು ದ್ವಿತೀಯ ಪಂದ್ಯದಲ್ಲಿ 34 ಎಸೆತಗಳಲ್ಲಿ 45 ರನ್ ಚಚ್ಚಿದ್ದರು. ಮೂರನೇ ಮ್ಯಾಚ್ನಲ್ಲಿ ವೈಭವ್ ಬ್ಯಾಟ್ನಿಂದ 31 ಎಸೆತಗಳಲ್ಲಿ 86 ರನ್ಗಳು ಮೂಡಿಬಂದಿದ್ದವು.



ಇನ್ನು ನಾಲ್ಕನೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 78 ಎಸೆತಗಳಲ್ಲಿ 143 ರನ್ಗಳ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದ್ದರು. ಹಾಗೆಯೇ ಕೊನೆಯ ಪಂದ್ಯದಲ್ಲಿ 42 ಎಸೆತಗಳಲ್ಲಿ 33 ರನ್ ಬಾರಿಸಿದ್ದಾರೆ. ಈ ಮೂಲಕ 5 ಪಂದ್ಯಗಳಿಂದ ವೈಭವ್ ಸೂರ್ಯವಂಶಿ ಬರೋಬ್ಬರಿ 355 ರನ್ ಕಲೆಹಾಕಿದ್ದಾರೆ. ಈ ಮೂಲಕ ಯೂತ್ ಏಕದಿನ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
