



ಬೆಂಗಳೂರು: ಪ್ರೀತಿಸಿ ಮದುವೆಯಾಗುವ ಭರವಸೆನೀಡಿ ದೈಹಿಕ ಸಂಪರ್ಕ ಬೆಳೆಸಿ, ಗರ್ಭಿಣಿಯಾದ ಬಳಿಕ ವಂಚಿಸಿದ ಆರೋಪದಡಿ ಪುತ್ತೂರಿನ ಬಿಜೆಪಿ ಉಚ್ಚಾಟಿತ ನಾಯಕನ ಪುತ್ರ ಕೃಷ್ಣ ಜೆ. ರಾವ್ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ರಾಜಿ ಸಂಧಾನದ ಮೂಲಕ ವಿವಾದ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚನೆ ನೀಡಿದೆ.


ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗಲು ಆದೇಶ: ಪ್ರಕರಣ ರದ್ದು ಕೋರಿ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ಅವರ ಪರ ವಕೀಲ ಪಿ.ಪಿ. ಹೆಗ್ಡೆ ಅವರು ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸುವ ಪ್ರಸ್ತಾವನೆಯನ್ನು ಕೋರ್ಟ್ ಮುಂದೆ ಇರಿಸಿದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ, ಜೂನ್ 19 ರಂದು ಸಂತ್ರಸ್ತೆ, ಆರೋಪಿ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವ್ಯಕ್ತಿಗಳು ಕಡ್ಡಾಯವಾಗಿ ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗಬೇಕು ಎಂದು ಸೂಚಿಸಿದೆ

ಹಣ ಪಾವತಿಗೆ ಗಡುವು:
ಹೈಕೋರ್ಟ್ನ ಹಿಂದಿನ ನಿರ್ದೇಶನದಂತೆ, ಆರೋಪಿ ಕೃಷ್ಣ ಜೆ. ರಾವ್ ಈಗಾಗಲೇ ಮೊದಲ ತಿಂಗಳ 75 ಸಾವಿರ ರೂಪಾಯಿಗಳನ್ನು ಕೋರ್ಟ್ನಲ್ಲಿ ಠೇವಣಿ ಇಟ್ಟಿದ್ದರು. ಈ ಹಣವನ್ನು ತಕ್ಷಣವೇ ಸಂತ್ರಸ್ತೆಗೆ ಪಾವತಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ. ಇದರ ಜೊತೆಗೆ, ಮುಂದಿನ ನಾಲ್ಕು ದಿನಗಳಲ್ಲಿ ಎರಡನೇ ತಿಂಗಳ 75 ಸಾವಿರ ರೂಪಾಯಿಗಳನ್ನು ಪಾವತಿಸುವಂತೆ ಆರೋಪಿಗೆ ಸೂಚನೆ ನೀಡಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಲಾಗಿದ್ದು, ಮಧ್ಯಸ್ಥಿಕೆ ಕೇಂದ್ರದಲ್ಲಿ ನಡೆಯುವ ಸಂಧಾನದ ವರದಿಯ ಆಧಾರದ ಮೇಲೆ ಮುಂದಿನ ಕಾನೂನು ಪ್ರಕ್ರಿಯೆಗಳು ನಿರ್ಧಾರವಾಗಲಿವೆ.
