




ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ಬಗ್ಗೆ ಮಾತನಾಡುವ ಮುನ್ನ ಹೋಂವರ್ಕ್ ಮಾಡಿಕೊಂಡು ಬನ್ನಿ ಎಂದು ಪುತ್ತೂರು ಗ್ರಾಮಾಂತರ ಮಂಡಲ ಯುವ ಮೋರ್ಚಾದ ಶಿಶಿರ್ ಪೆರ್ವೋಡಿ ಅವರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿದ ರೀತಿಯನ್ನು ಪುತ್ತೂರು ಗ್ರಾಮಾಂತರ ಮಂಡಲದ ಯುವ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಬೂತ್ ಮಟ್ಟದ ಕಾರ್ಯದರ್ಶಿಯಾಗಿ, ಪಂಚಾಯತ್ ಸದಸ್ಯರಾಗಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಪಕ್ಷದಲ್ಲಿ ವಿವಿಧ ಹಂತಗಳಲ್ಲಿ ಕೆಲಸ ಮಾಡಿ, ಪಕ್ಷಕ್ಕಾಗಿ ಶ್ರಮಿಸಿದ ಬಳಿಕ ಸತೀಶ್ ಕುಂಪಲ ಅವರು ಶಾಸಕರಾಗಲು ಟಿಕೆಟ್ ಪಡೆದವರು. ಆದರೆ, ಶಾಸಕರಾದ ಅಶೋಕ್ ಕುಮಾರ್ ರೈ ಅವರಂತೆ ಗ್ರಾಮ ಪಂಚಾಯತ್ ಚುನಾವಣೆ ಬಂದಾಗ ವಿದೇಶದಲ್ಲಿ ಕುಳಿತುಕೊಂಡ ಇತಿಹಾಸ ಅವರಿಗಿಲ್ಲ ಎಂದು ಶಿಶಿರ್ ಪೆರ್ವೋಡಿ ಟೀಕಿಸಿದ್ದಾರೆ.
ಪಕ್ಷದ ನಾಯಕರ ಬಗ್ಗೆ ಕೀಳಾಗಿ ಮಾತನಾಡುವ ಮೊದಲು ಅವರ ರಾಜಕೀಯ ಹಿನ್ನೆಲೆ ಮತ್ತು ಪಕ್ಷಕ್ಕಾಗಿ ಅವರು ಸಲ್ಲಿಸಿದ ಸೇವೆಯ ಬಗ್ಗೆ ತಿಳಿದುಕೊಳ್ಳಬೇಕು. ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಮಾಡಿರುವ ಆರೋಪಗಳನ್ನು ಸುಳ್ಳು ಎಂದು ಸಾಬೀತುಪಡಿಸಿದ ಬಳಿಕ ಜಿಲ್ಲಾಧ್ಯಕ್ಷರ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.
ಇನ್ನು, ಶಾಸಕರು ಅಭಿವೃದ್ಧಿಯ ಬಗ್ಗೆ ಎಲ್ಲೆಡೆ ಬ್ಯಾನರ್ ಹಾಕಿಕೊಳ್ಳುವುದಷ್ಟೇ ಕಾಣಿಸುತ್ತಿದೆ. ಆದರೆ, ಕಳೆದ ನಾಲ್ಕು ತಿಂಗಳಿಂದ ಯಾವುದೇ ಕಾಮಗಾರಿ ಆರಂಭವಾಗಿಲ್ಲ ಎಂದು ಶಿಶಿರ್ ಪೆರ್ವೋಡಿ ಆರೋಪಿಸಿದ್ದಾರೆ.
ಪುತ್ತೂರಿನಲ್ಲಿ ಈವರೆಗೆ ಇಂತಹ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುವ ಶಾಸಕರು ಬಂದಿರಲಿಲ್ಲ. ಆ ದಾಖಲೆಯನ್ನು ಅಶೋಕ್ ಕುಮಾರ್ ರೈ ಅವರು ಮುರಿಯುತ್ತಾರೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಟೀಕಿಸಿದ ಅವರು, ಶಾಸಕರ ಅಭಿವೃದ್ಧಿಯ ಹೇಳಿಕೆಗಳು ಸುಳ್ಳು ಎಂದು ಆರೋಪಿಸಿ ಪುತ್ತೂರು ಗ್ರಾಮಾಂತರ ಮಂಡಲದ ಯುವ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
