




ನವದೆಹಲಿ: ಇರಾನ್ ರಾಜಧಾನಿ ಟೆಹ್ರಾನ್‌ನ ಸಿಸಿ ಕ್ಯಾಮೆರಾ ಹ್ಯಾಕ್ ಮಾಡಿ ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಮತ್ತು ಆಪ್ತರ ಮೇಲೆ ದೂರದಲ್ಲೆಲ್ಲೋ ಕೂತು ಇಸ್ರೇಲ್ ಕಣ್ಣಿಟ್ಟಿದ್ದ ರೀತಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಕೂಡ ಭಾರತದ ಮೇಲೆ ಕಣ್ಣಿಟ್ಟಿದ್ದ ಆಘಾತಕಾರಿ ವಿಚಾರ ಬಯಲಾಗಿದೆ. 4 ರಾಜ್ಯಗಳ ಹಲವು ನಗರಗಳ ಆಯಕಟ್ಟಿನ ಜಾಗದಲ್ಲಿ ಭಾರತದ ಸೇನೆಯ ಚಲನವಲನಗಳನ್ನು ವೀಕ್ಷಿಸಲು ಪಾಕ್ ಸಿಸಿಟಿವಿ ಅಳವಡಿಸಿರುವುದು ಗೊತ್ತಾಗಿದೆ.

ನಿಷೇಧಿತ ಬಬ್ಬರ್ ಖಾಲ್ಸಾ ಇಂಟರ್ ನ್ಯಾಷನಲ್ ಉಗ್ರ ಸಂಘಟನೆಯ ಸ್ಥಳೀಯ ಕಾರ್ಯಕರ್ತರನ್ನು ಬಳಸಿ ಕೊಂಡು ಕಾರ್ಯನಿರ್ವಹಿಸುತ್ತಿದ್ದ ಶಸ್ತ್ರಾಸ್ತ್ರ ಹಾಗೂ ಬೇಹುಗಾರಿಕಾ ಜಾಲವೊಂದನ್ನು ದೆಹಲಿ ಪೊಲೀಸರ ವಿಶೇಷ ಪಡೆ ಭೇದಿಸಿದೆ. ಈ ಪ್ರಕರಣದಲ್ಲಿ 11 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಪಂಜಾಬ್, ರಾಜಸ್ಥಾನ, ಹರ್ಯಾಣ, ಕಾಶ್ಮೀರದ ಗಡಿಯಲ್ಲಿನ ಸೂಕ್ಷ ಮಿಲಿಟರಿ ನೆಲೆಗಳ ಸಮೀಪ ಸೋಲಾರ್ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ರಹಸ್ಯವಾಗಿ ಅಳವಡಿಸುವ ಮೂಲಕ ಪಾಕಿಸ್ತಾನಕ್ಕೆ ರಿಯಲ್ ಟೈಮ್‌ನಲ್ಲಿ ಸೇನಾ ಪಡೆಗಳ ಓಡಾಟದ ಮಾಹಿತಿ ರವಾನಿಸುತ್ತಿದ್ದರು. ಈ ಬಂಧನದಿಂದ ಸಂಭಾವ್ಯ ಭಯೋತ್ಪಾದನಾ ದಾಳಿಯನ್ನು ತಪ್ಪಿಸಿದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಶೇಷ ಪಡೆ ಮೊದಲು ಪಂಜಾಬ್ ಮತ್ತು ದೆಹಲಿಯಲ್ಲಿ ಆರು ಮಂದಿಯನ್ನು ಬಂಧಿಸಿದ್ದು, ಸಿಸಿಟೀವಿ ಕ್ಯಾಮೆರಾ, ನಾಲ್ಕು ಪಿಸ್ತೂಲ್‌ಗಳು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದೆ. ಎರಡನೇ ಕಾರ್ಯಾಚರಣೆಯನ್ನು ಮಿಲಿಟರಿ ಗುಪ್ತಚರ ಮಾಹಿತಿ ಆಧಾರದ ಮೇಲೆ ನಡೆಸಲಾಗಿದ್ದು, ಅದರಂತೆ ಪಂಜಾಬ್‌ನಲ್ಲಿ ಮತ್ತೆ 5 ಮಂದಿ ಬಂಧಿಸಲಾಗಿದೆ.
