



ಮಂಗಳೂರು: 2024 ರ ಆ.15ರಂದು ನಡೆದ ನವದೆಹಲಿಯ ಕೆಂಪುಕೋಟೆಯ ಸ್ವಾತಂತ್ರೋತ್ಸವ ಸಮಾರಂಭಕ್ಕೆ ಆಹ್ವಾನಿತರಾಗಿದ್ದ ಪೆರುವಾಯಿ ಗ್ರಾಪಂ ಅಧ್ಯಕ್ಷೆ ನಫೀಸಾ ಲಂಚ ಸ್ವೀಕಾರ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ದೂರುದಾರರು ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದಲ್ಲಿ ತಮ್ಮ ಮಾವನ 1ಎಕರೆ ಕೃಷಿ ಜಮೀನಿನಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮ ಪಂಚಾಯತ್‌ಗೆ ಸರ್ಕಾರದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ತಮ್ಮ ಜಾಗಕ್ಕೂ ಒಂದು ಕೊಳವೆ ಬಾವಿಯನ್ನು ಮಾಡಿಕೊಡಲು 2024ರಲ್ಲಿ ಪಿಡಿಒ, ಗ್ರಾಮ ಪಂಚಾಯತ್, ಪೆರುವಾಯಿ ಗ್ರಾಮ ಪಂಚಾಯತ್‌ನವರಿಗೆ ಅರ್ಜಿ ಸಲ್ಲಿಸಿದ್ದರು. 2024ರಲ್ಲಿ ಪೆರುವಾಯಿ ಗ್ರಾಮ ಪಂಚಾಯತ್‌ರವರು ಸತಾಯಿಸಿ ಕೊನೆಯಲ್ಲಿ ದೂರುದಾರರ ಮಾವನವರ ಹೆಸರನ್ನು ಕೊಳವೆ ಬಾವಿ ಲಿಸ್ಟ್‌ನಲ್ಲಿ ಸೇರಿಸಿರುವುದಿಲ್ಲ.

ಬಳಿಕ 2025ರಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಸರ್ಕಾರವು ಕೃಷಿಕರಿಗೆ ಕೊಳವೆ ಬಾವಿ ಮಾಡಿಕೊಡುತ್ತಿರುವ ಕುರಿತು ತಿಳಿದು ಬಂದಿದೆ. ದೂರುದಾರರ ಮಾವನವರು ಮತ್ತೆ 2025ರ ಮೇ ಸಂದರ್ಭ ಕೊಳವೆ ಬಾವಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಆದ್ದರಿಂದ ದೂರುದಾರರ ಪತ್ನಿ ಪೆರುವಾಯಿ ಗ್ರಾಮ ಪಂಚಾಯತ್ ಕಚೇರಿಗೆ ಎರಡು ಮೂರು ಬಾರಿ ಹೋಗಿ ವಿಚಾರಿಸಿದರೂ ಕೂಡ ಸರಿಯಾಗಿ ಪ್ರತಿಕ್ರಿಯೆ ನೀಡಿರುವುದಿಲ್ಲ.

ದೂರುದಾರರ ಮಾವನಿಗೆ ಸುಮಾರು 75 ವರ್ಷ ವಯಸ್ಸಾಗಿದ್ದು, ಅವರಿಗೆ ಅಸೌಖ್ಯ ಇದ್ದುದರಿಂದ ದೂರುದಾರರನ್ನು ಕರೆದು ಕೊಳವೆ ಬಾವಿ ಬಗ್ಗೆ ಪಂಚಾಯತ್ ಗೆ ಹೋಗಿ ವಿಚಾರಿಸಿಕೊಂಡು ಬರುವಂತೆ ತಿಳಿಸಿದ್ದಾರೆ
ಅದರಂತೆ ದೂರುದಾರರು ಸೆ.2ರಂದು ಪೆರುವಾಯಿ ಗ್ರಾಮ ಪಂಚಾಯತ್‌ಗೆ ಹೋಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನೆಫಿಸಾರಲ್ಲಿ ತನ್ನ ಮಾವನವರ ಹೆಸರಿಗೆ ಕೊಳವೆ ಬಾವಿ ಮಂಜೂರು ಆಗಿದೆಯೇ ಎಂಬ ಬಗ್ಗೆ ವಿಚಾರಿಸಿದ್ದಾರೆ. ‘ನಿಮಗೆ ಬೋರ್‌ವೆಲ್ ಉಚಿತವಾಗಿ ಆಗುತ್ತದೆ. ಬೆಂಗಳೂರು ಆಫೀಸ್‌ಗೆ ಹತ್ತು ಸಾವಿರ ಕೊಡಲಿಕ್ಕಿದೆ. ಹಣ ಕೊಟ್ಟರೆ ಅವರು ಪಾಸ್ ಮಾಡುತ್ತಾರೆ. ತಾನು ಬೆಂಗಳೂರಿಗೆ ಹೋಗಿ ನಿಮ್ಮ ಕೆಲಸ ಮಾಡಿಸುತ್ತೇನೆ. ಹಣ ಕೊಟ್ಟಲ್ಲಿ ಮಾತ್ರ ಬೋರ್‌ವೆಲ್ ಪಾಸ್ ಮಾಡಿಸಿ ಕೊಡುತ್ತೇನೆ’ ಎಂದು ಹೇಳಿರುತ್ತಾರೆ. ದೂರುದಾರರು ತನ್ನಲ್ಲಿ ಅಷ್ಟು ಹಣ ಇಲ್ಲ ಎಂದು ಹೇಳಿ ವಾಪಾಸು ಬಂದಿರುತ್ತಾರೆ.
ಸೆ.4ರಂದು ದೂರುದಾರರು ಮತ್ತೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನೆಫಿಸಾರರಲ್ಲಿ ಬೋರ್‌ವೆಲ್ ಹಾಕಿಸಿ ಕೊಡಲು ಕೇಳಿಕೊಂಡಾಗ ಮತ್ತೆ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಂತೆ ಪ್ರಕರಣ ದಾಖಲಾಗಿರುತ್ತದೆ.
ಸೆ.6ರಂದು ನಫೀಸಾರವರು ಬಿಲ್ ಕಲೆಕ್ಟರ್ ವಿಲಿಯಂ ಅವರಿಗೆ ದೂರುದಾರರಿಂದ 10,000ರೂ. ಲಂಚ ಪಡೆದುಕೊಳ್ಳಲು ಸೂಚಿಸಿದ್ದಾರೆ. ಅದರಂತೆ ಆತ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿರುತ್ತಾರೆ. ಅದರಂತೆ ನಫಿಸಾ ಮತ್ತು ಬಿಲ್ ಕಲೆಕ್ಟರ್ ವಿಲಿಯಂರವರನ್ನು ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
