




ಕಾಪು: ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿಯನ್ನು ಅಪರಾಧಿ ಎಂದು ಸಾಬೀತುಪಡಿಸಿ ಪೋಕೋ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಶ್ರೀನಿವಾಸ್ ಸುವರ್ಣ ಆದೇಶ ನೀಡಿದ್ದಾರೆ.

ನ್ಯಾಯಾಲಯ ದೋಷಿ ಎಂದು ನಿರ್ಧರಿಸಿದ ವ್ಯಕ್ತಿ ಬಾಗಲಕೋಟೆ ಜಿಲ್ಲೆಯ ಮಂಜುನಾಥ್ ಎನ್.
ಬಾಲಕಿ ಕಾಪು ತಾಲ್ಲೂಕಿನವಳಾಗಿದ್ದು ಈಕೆಯ ಅಣ್ಣನ ಸ್ನೇಹಿತ ಈ ಆರೋಪಿ. ಆಕೆಯನ್ನು ಫೋನ್ ನಲ್ಲಿ ಸಂಪರ್ಕಿಸಿ ಪ್ರೀತಿಯ ನಾಟಕವಾಡಿದ್ದಾನೆ. ಸಂತ್ರಸ್ತೆ ಗದಗದ ಅಜ್ಜಿ ಮನೆಗೆ ಹೋಗಿದ್ದಾಗ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಲಾತ್ಕಾರದಿಂದ ಅತ್ಯಾಚಾರ ಎಸಗಿದ್ದಾನೆ.

ಈ ವಿಚಾರ ಯಾರಿಗಾದರೂ ತಿಳಿಸಿದರೆ ಮಾಡಿಟ್ಟ ವೀಡಿಯೋವನ್ನು ಮನೆಯವರಿಗೆ ಕಳುಹಿಸುವುದಾಗಿ ಬೆದರಿಸಿದ್ದಾನೆ. ಈ ಹಿನ್ನೆಲೆ ಬಾಲಕಿ ತಾಯಿಯ ಮುಖೇನ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ್ದ ಅಂದಿನ ಕಾರ್ಕಳ ಡಿವೈಎಸ್ಪಿ ಅರವಿಂದ್ ಕಲ್ಲಗುಜ್ಜಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಇದೀಗ 16 ಸಾಂದರ್ಭಿಕ ಸಾಕ್ಷಿಗಳ ವಿಚಾರಣೆ ನಡೆಸಿ ಆರೋಪಿಯನ್ನು ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಮಾನಿಸಿದೆ. ಆರೋಪಿಗೆ 20 ವರ್ಷ ಕಠಿಣ ಕಾರಾಗ್ರಹ ಶಿಕ್ಷೆ, 25 ಸಾವಿರ ರೂ. ದಂಡ ಹಾಗೂ ನೊಂದ ಬಾಲಕಿಗೆ ಸರಕಾರದಿಂದ 1.50 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
