



ಸುಳ್ಯ: ಪಂಜದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ, ಆರ್ಥಿಕ ವ್ಯವಹಾರಗಳು ಹಾಗೂ ಗುತ್ತಿಗೆ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಉಂಟಾಗಿರುವ ಗೊಂದಲಗಳಿಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿ ಭಕ್ತಾದಿಗಳು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಕಾನತ್ತೂರು ಅವರಿಗೆ ಮನವಿ ಸಲ್ಲಿಸಿದ್ದಾರೆ.


ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯವೈಖರಿ ಹಾಗೂ ಹಣಕಾಸಿನ ವ್ಯವಹಾರಗಳ ಬಗ್ಗೆ ಇತ್ತೀಚೆಗೆ ಹಲವು ಅನುಮಾನಗಳು ಮತ್ತು ಗೊಂದಲಗಳು ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಪಾರದರ್ಶಕ ಮಾಹಿತಿ ನೀಡಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

ಆ.15ರಂದು ಸಾರ್ವಜನಿಕ ಸಭೆ ಕರೆದು ದೇವಸ್ಥಾನದ ಆಡಳಿತ ಮತ್ತು ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ದೇವಸ್ಥಾನದ ಆಚಾರ-ವಿಚಾರ ಹಾಗೂ ಪೂಜಾ ವಿಧಿವಿಧಾನಗಳಲ್ಲಿ ಲೋಪದೋಷಗಳಾಗುತ್ತಿವೆ ಎಂಬ ಆರೋಪಗಳ ಕುರಿತು ಧಾರ್ಮಿಕ ಸ್ಪಷ್ಟನೆ ನೀಡಬೇಕು. ದೇವಸ್ಥಾನವು ಸಾಲದಲ್ಲಿದೆಯೇ, ಸಾಲ ಪಡೆದಿದ್ದರೆ ಯಾರಿಂದ ಎಷ್ಟು ಮೊತ್ತ ಪಡೆಯಲಾಗಿದೆ ಮತ್ತು ಯಾವ ಉದ್ದೇಶಕ್ಕೆ ಬಳಸಲಾಗಿದೆ ಎಂಬ ಸಂಪೂರ್ಣ ಲೆಕ್ಕ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಅದೇ ರೀತಿ, ಅಧ್ಯಕ್ಷರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ದೇವಸ್ಥಾನದ ಹೆಸರಿನಲ್ಲಿ ಇದ್ದ ಎಫ್‌ಡಿಗಳ ಮೊತ್ತ ಹಾಗೂ ಪ್ರಸ್ತುತ ಇರುವ ಠೇವಣಿಗಳ ವಿವರವನ್ನು ಬಹಿರಂಗಪಡಿಸಬೇಕು. ಠೇವಣಿ ಹಣವನ್ನು ಹಿಂಪಡೆದಿದ್ದರೆ ಅದರ ಕಾರಣ ಮತ್ತು ಬಳಕೆಯ ಸಂಪೂರ್ಣ ಲೆಕ್ಕ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ದೇವಸ್ಥಾನದ ಎಸ್‌ಬಿ ಖಾತೆಯಿಂದ ಹಣ ಹಿಂಪಡೆಯುವ ವಿಚಾರದಲ್ಲೂ ಜಂಟಿ ಸಹಿ ನಿಯಮ ಪಾಲನೆಯಾಗುತ್ತಿದೆಯೇ ಎಂಬ ಬಗ್ಗೆ ಸ್ಪಷ್ಟನೆ ಕೇಳಲಾಗಿದೆ. ಟ್ರಸ್ಟಿಗಳು ಹಾಗೂ ಆಡಳಿತ ಮಂಡಳಿ ಅಸ್ತಿತ್ವದಲ್ಲಿದ್ದರೂ ಏಕಪಕ್ಷೀಯವಾಗಿ ಹಣಕಾಸು ವ್ಯವಹಾರ ನಡೆಸಲಾಗುತ್ತಿದೆ ಎಂಬ ಆರೋಪದ ಕುರಿತು ಉತ್ತರ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಇನ್ನು, ದೇವಸ್ಥಾನದ ಕೆಲವು ಸಿಬ್ಬಂದಿಗಳನ್ನು ಏಕಾಏಕಿ ವಜಾಗೊಳಿಸಿರುವುದಕ್ಕೆ ಕಾರಣವೇನು ಎಂಬುದನ್ನು ಸಾರ್ವಜನಿಕವಾಗಿ ತಿಳಿಸಬೇಕು ಎಂದು ಆಗ್ರಹಿಸಲಾಗಿದೆ.
ದೇವಸ್ಥಾನಕ್ಕೆ ಸೇರಿದ ತೋಟವನ್ನು ಗುತ್ತಿಗೆ ನೀಡಲು ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿರುವ ವಿಚಾರವೂ ಮನವಿಯಲ್ಲಿ ಪ್ರಸ್ತಾಪವಾಗಿದೆ. ಜಾಹೀರಾತಿನಲ್ಲಿ ಆಡಳಿತ ಮಂಡಳಿಯ ನಿರ್ಣಯ ಸಂಖ್ಯೆ ನಮೂದಿಸದಿರುವುದರ ಬಗ್ಗೆ ಹಾಗೂ ಗುತ್ತಿಗೆ ಪ್ರಕ್ರಿಯೆಗೆ ಸಂಬಂಧಿಸಿದ ಕಾನೂನು ಮತ್ತು ದತ್ತಿ ಇಲಾಖೆಯ ಅನುಮತಿಯ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.
ದೇವಸ್ಥಾನದ ಪ್ರಮುಖ ನಿರ್ಣಯಗಳನ್ನು ಟ್ರಸ್ಟಿಗಳ ಸಭೆಯಲ್ಲಿ ಒಮ್ಮತದಿಂದ ತೆಗೆದುಕೊಳ್ಳಲಾಗುತ್ತಿದೆಯೇ ಅಥವಾ ಅಧ್ಯಕ್ಷರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆಯೇ ಎಂಬುದರ ಬಗ್ಗೆಯೂ ಸ್ಪಷ್ಟನೆ ನೀಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ದೇವಸ್ಥಾನದ ಪಾವಿತ್ರ್ಯತೆ, ಆಡಳಿತದ ಪಾರದರ್ಶಕತೆ ಮತ್ತು ಸಾರ್ವಜನಿಕರ ವಿಶ್ವಾಸವನ್ನು ಕಾಪಾಡುವ ಉದ್ದೇಶದಿಂದಲೇ ಈ ಪ್ರಶ್ನೆಗಳನ್ನು ಕೇಳಲಾಗುತ್ತಿದೆ ಎಂದು ಭಕ್ತರು ತಿಳಿಸಿದ್ದಾರೆ.
ಆ.15ರಂದು ನಿಗದಿತ ಸಮಯದಲ್ಲಿ ಸಾರ್ವಜನಿಕ ಸಭೆ ಕರೆದು ಎಲ್ಲಾ ಪ್ರಶ್ನೆಗಳಿಗೆ ಸೂಕ್ತ ಹಾಗೂ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಮನವಿ ಪತ್ರಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ನೂರಾರು ಮಂದಿ ಸಹಿ ಮಾಡಿದ್ದಾರೆ.
