


ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳ್ಪಾಡಿ ಪ್ರದೇಶದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಕಳವಾದ ಚಿನ್ನಾಭರಣ ಮತ್ತು ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 71/2026ರಡಿ ಬಿಎನ್‌ಎಸ್-2023ರ ಕಲಂ 303(2) ಅನ್ವಯ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಬಂಟ್ವಾಳ ಬಾಳ್ತಿಲ ನಿವಾಸಿ ಕುಮಾರಿ ಪೃಥ್ವಿ (18) ಹಾಗೂ ಮಂಗಳೂರು ಸುರತ್ಕಲ್ ನಿವಾಸಿ ಕಿಶಾನ್ (22) ಅವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಒಟ್ಟು ₹2,50,000 ಮೌಲ್ಯದ 21 ಗ್ರಾಂ ಚಿನ್ನಾಭರಣ ಹಾಗೂ ₹600 ನಗದು ಹಣವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖಾಧಿಕಾರಿ ಎಎಸ್‌ಐ ನವೀನ್ ಅವರ ನೇತೃತ್ವದಲ್ಲಿ ಹೆಡ್ ಕಾನ್‌ಸ್ಟೇಬಲ್‌ಗಳಾದ ಸುರೇಶ್ ಕುಮಾರ್, ರಾಜೇಶ್, ರಕ್ಷೀತ್ ಹಾಗೂ ಕಾನ್‌ಸ್ಟೇಬಲ್‌ಗಳಾದ ಬಸವರಾಜ ಕುಡಗುಂಟಿ, ನಾಗನಾಥ, ಮಹಿಳಾ ಪೊಲೀಸ್ ಸಿಬ್ಬಂದಿಗಳಾದ ರೇವತಿ, ಭಾಗ್ಯಮ್ಮ ಮತ್ತು ಮಾಲಾಶ್ರೀ ಅವರುಗಳು ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
ಇದಲ್ಲದೆ ಜಿಲ್ಲಾ ಬೆರಳಚ್ಚು ಘಟಕದ ಸಚಿನ್ ಮತ್ತು ಉದಯ್ ಹಾಗೂ ಜಿಲ್ಲಾ ಗಣಕಯಂತ್ರ ವಿಭಾಗದ ದಿವಾಕರ್ ಮತ್ತು ಸಂಪತ್ ಅವರುಗಳು ತನಿಖೆಗೆ ಸಹಕಾರ ನೀಡಿದ್ದು, ಪ್ರಕರಣ ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಕಳವಾದ ಸೊತ್ತುಗಳನ್ನು ಮರುಪಡೆಯಲು ಸಾಧ್ಯವಾಗಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
