



ಬೆಂಗಳೂರು: ಇಂದು ಸಂಜೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಬೆನ್ನಲ್ಲೇ, ಹಿರಿಯ ದಲಿತ ನಾಯಕ, ತುಮಕೂರಿನ ಕೊರಟಗೆರೆ ಶಾಸಕ ಡಾ. ಜಿ. ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ (DCM) ಹುದ್ದೆ ನೀಡುವುದು ಈಗ ಬಹುತೇಕ ಖಚಿತವಾಗಿದೆ.

ಆರಂಭದಲ್ಲಿ ಕೇವಲ ಮುಖ್ಯಮಂತ್ರಿ ಹುದ್ದೆಯನ್ನಷ್ಟೇ ಸೃಷ್ಟಿಸಲು ಯೋಚಿಸಿದ್ದ ಕಾಂಗ್ರೆಸ್ (Congress) ಹೈಕಮಾಂಡ್ ಸುದೀರ್ಘ ಚರ್ಚೆಗಳ ನಂತರ ಪಕ್ಷದ ಒಗ್ಗಟ್ಟು ಮತ್ತು ಪ್ರಮುಖ ಸಮುದಾಯಗಳ ಪ್ರಾತಿನಿಧ್ಯವನ್ನು ಬ್ಯಾಲೆನ್ಸ್ ಮಾಡಲು ಕೊನೆಗೂ ‘ಡಿಸಿಎಂ’ ಸೂತ್ರಕ್ಕೆ ಶರಣಾಗಿದೆ.

ಡಾ. ಜಿ. ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ಸಿಗುವಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಅತ್ಯಂತ ದೊಡ್ಡದಾಗಿದೆ. “ಪರಮೇಶ್ವರ್ ಅವರು ಸತತ 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದವರು. ರಾಜ್ಯದ ಅತ್ಯಂತ ಪ್ರಭಾವಿ ದಲಿತ ನಾಯಕರಾಗಿರುವ ಅವರಿಗೆ ಗೌರವಯುತ ಸ್ಥಾನ ಸಿಗಲೇಬೇಕು” ಎಂದು ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಗಟ್ಟಿಯಾದ ಪಟ್ಟು ಹಿಡಿದಿದ್ದರು. ಸಿದ್ದರಾಮಯ್ಯ ಅವರ ಈ ಒತ್ತಡಕ್ಕೆ ಹೈಕಮಾಂಡ್ ಕೊನೆಗೂ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗುತ್ತಿದೆ.
