


ಉಪ್ಪಿನಂಗಡಿ: ಇಲ್ಲಿನ ಕೂಟೇಲು ಎಂಬಲ್ಲಿ ಸೋಮವಾರ ರಾತ್ರಿ ಕಾರು ಮತ್ತು ಲಾರಿಯ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಎಲ್ಲರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಕಾರ್ಕಳ ತಾಲೂಕಿನ ನಕ್ರೆ ಮೂಲದ ಕುಟುಂಬವೊಂದು ವ್ಯಾಗನರ್ ಕಾರಿನಲ್ಲಿ ಸುಬ್ರಹ್ಮಣ್ಯಕ್ಕೆ ಕ್ಷೇತ್ರ ದರ್ಶನಕ್ಕಾಗಿ ತೆರಳುತ್ತಿತ್ತು. ಕಾರು ಉಪ್ಪಿನಂಗಡಿಯ ಕೂಟೇಲು ಸಮೀಪಿಸುತ್ತಿದ್ದಂತೆ, ಎದುರಿನಿಂದ ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯು ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ದೀಪಕ್ (45), ಯಾತ್ರಾರ್ಥಿಗಳಾದ ಗುರುರಾಜ್ (46) ಧನುಷ್ (15), ಭಾರತಿ (48), ಗೀತಾ(55) ಸೇರಿದಂತೆ ಕಾರಿನಲ್ಲಿದ್ದ ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ಲಾರಿ ಚಾಲಕ ದಾಮೋದರ್ ಅವರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಅಪಘಾತ ನಡೆದ ತಕ್ಷಣ ಸ್ಥಳೀಯರಾದ ಯು.ಟಿ. ಫಾಯಾಜ್, ವಿದ್ಯಾಧರ ಜೈನ್, ಝಕಾರಿಯಾ ಹಾಗೂ ಇತರರು ಸ್ಥಳಕ್ಕೆ ಧಾವಿಸಿ, ಕಾರಿನೊಳಗೆ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಹರಸಾಹಸಪಟ್ಟು ಹೊರತೆಗೆದರು.
ಬಳಿಕ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ
