



ಪುತ್ತೂರು: ಪುಣಚ ಗ್ರಾಮದ ಪ.ಜಾತಿ ಕಾಲನಿಯ ನಿವಾಸಿಗಳಿಗೆ 94ಸಿ ಹಕ್ಕುಪತ್ರ ವಿತರಣೆ ವಿಚಾರಕ್ಕೆ ಸಂಬಂಧಿಸಿ ಬಂಟ್ವಾಳ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಗೆ ಹೊಸ ತಿರುವು ಸಿಕ್ಕಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆಲ ಫಲಾನುಭವಿಗಳು ಇದೀಗ ಶಾಸಕ ಅಶೋಕ್ ರೈ ಅವರ ಕಚೇರಿಗೆ ಭೇಟಿ ನೀಡಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

“ನಾವು ಶಾಸಕ ಅಶೋಕ್ ರೈ ಅವರ ವಿರುದ್ಧ ಪ್ರತಿಭಟನೆ ಮಾಡಿಲ್ಲ. ನಮ್ಮನ್ನು ಬಿಜೆಪಿಯವರು ಕರೆದುಕೊಂಡು ಹೋಗಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಒತ್ತಾಯಿಸಿದ್ದರು. ನಾವು ಯಾರ ವಿರುದ್ಧವೂ ಮಾತನಾಡಿಲ್ಲ. ನಮ್ಮ ಸಮಸ್ಯೆಯನ್ನು ಕೆಲವರು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ” ಎಂದು ಫಲಾನುಭವಿಗಳು ತಿಳಿಸಿದ್ದಾರೆ.

ಅವರು ಮಾತನಾಡುತ್ತಾ, “ನಮ್ಮ ಜಾಗದ ಹಕ್ಕುಪತ್ರ ಪ್ರಕ್ರಿಯೆ ನಡೆದಿರುವುದು ಶಾಸಕ ಅಶೋಕ್ ರೈ ಅವರ ಪ್ರಯತ್ನದಿಂದಲೇ ಎಂಬುದನ್ನು ನಾವು ಮೊದಲಿನಿಂದಲೇ ಹೇಳಿದ್ದೇವೆ. ಆದರೆ ಹಕ್ಕುಪತ್ರ ಇನ್ನೂ ಕೈಗೆ ಸಿಗದಿರುವುದರಿಂದ ಪ್ರತಿಭಟನೆ ಮಾಡಿದರೆ ಬೇಗ ಸಿಗುತ್ತದೆ ಎಂದು ಹೇಳಿ ನಮ್ಮನ್ನು ತಾಲೂಕು ಕಚೇರಿ ಎದುರು ಕೂರಿಸಲಾಯಿತು” ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಶೋಕ್ ರೈ, “ಹಕ್ಕುಪತ್ರ ಕೊಟ್ಟರೆ ನಾನು ಕಳೆದುಕೊಳ್ಳುವಂತಹದ್ದು ಏನೂ ಇಲ್ಲ. ನಿಮ್ಮ ಹಕ್ಕುಪತ್ರ ಪ್ರಕ್ರಿಯೆಯನ್ನು ನಾನು ಮಾಡಿಸಿದ್ದೇನೆ. ಎಲ್ಲವೂ ಸರಿಯಾಗುವ ಹಂತದಲ್ಲಿದ್ದಾಗ ಪ್ರತಿಭಟನೆ ನಡೆದಿದೆ. ಈಗ ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವರು ಕಾನೂನು ಹೋರಾಟ ಆರಂಭಿಸಿದ್ದಾರೆ. ಮುಂದಿನ ಬೆಳವಣಿಗೆಗಳು ಕಾನೂನು ಪ್ರಕಾರ ನಡೆಯಲಿವೆ” ಎಂದು ಹೇಳಿದರು.
ಇದೇ ವೇಳೆ, “ನಿಮ್ಮನ್ನು ಪ್ರತಿಭಟನೆಗೆ ಕರೆದುಕೊಂಡು ಹೋದವರು ಈಗ ನಿಮ್ಮ ಜೊತೆಯಲ್ಲಿದ್ದಾರೆಯೇ? ಈ ವಿಚಾರದಲ್ಲಿ ನೀವು ಬಲಿಪಶುಗಳಾಗಿದ್ದೀರಿ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ” ಎಂದು ಶಾಸಕ ಅಶೋಕ್ ರೈ ಪ್ರತಿಕ್ರಿಯಿಸಿದರು.
