



ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ರಾಜ್ಯಭಾರಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಮುಂಗಾರು ಆರಂಭಕ್ಕೂ ಮುನ್ನವೇ ಡಿಕೆ ಯುಗಾರಂಭವಾಗಲಿದೆ. ಸೋಮವಾರ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಪಟ್ಟಾಭಿಷೇಕ ನಡೆಯೋ ಸಾಧ್ಯತೆ ಇದೆ. ಹೀಗಾಗಿ ಭಾನುವಾರ (ಮೇ 31) ಸಂಜೆ ಕಾಂಗ್ರೆಸ್ (Congress) ಶಾಸಕಾಂಗ ಸಭೆ ನಡೆಯಲಿದ್ದು, ಸುರ್ಜೇವಾಲಾ, ಕೆ.ಸಿ ವೇಣುಗೋಪಾಲ್ ನೇತೃತ್ವದಲ್ಲಿ ಶಾಸಕಾಂಗ ನಾಯಕನ ಆಯ್ಕೆಯೂ ನಡೆಯಲಿದೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಡಿಕೆ ಶಿವಕುಮಾರ್ ಅವರ ಮಿಡ್‌ನೈಟ್ ಮೀಟಿಂಗ್ ತೀವ್ರ ಕುತೂಹಲ ಕೆರಳಿಸಿದೆ. ಸಚಿವ ಸಂಪುಟಕ್ಕೆ ಕಸರತ್ತು ನಡೆಯುತ್ತಿರುವ ಹೊತ್ತಿನಲ್ಲೇ ಮಂಡ್ಯ ಜಿಲ್ಲೆಯ ಶಾಸಕರು, ಸಚಿವರೊಂದಿಗೆ ಡಿಕೆಶಿ ಮಿಡ್‌ನೈಟ್ ಮೀಟಿಂಗ್ ನಡೆಸಿದ್ದಾರೆ.

ಹೈಕಮಾಂಡ್ ಭೇಟಿ ಬಳಿಕ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಸಚಿವ ಚೆಲುವರಾಯಸ್ವಾಮಿ, ಶಾಸಕ ಗಣಿಗ ರವಿಕುಮಾರ್, ಕಡಲೂರು ಉದಯ್ ಅವರೊಂದಿಗೆ ಸುಮಾರು 1 ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಆಪ್ತರಾದ ಬೇಳೂರು ಗೋಪಾಲಕೃಷ್ಣ, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ, ಮಾಜಿ ಅಧ್ಯಕ್ಷ ನಲಪಾಡ್ ಅವರೊಂದಿಗೂ ಚರ್ಚೆ ನಡೆಸಿದ್ದಾರೆ.
