
ಪುತ್ತೂರು: ಅಪಾಯಕಾರಿ ಕಟ್ಟಡವೊಂದರಲ್ಲಿ ಹೋಟೆಲ್ ಒಂದು ಅನಧಿಕೃತವಾಗಿ ಕಾರ್ಯಾಚರಿಸುತ್ತಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಬಂಟ್ವಾಳ ನ್ಯಾಯಾಲಯದ ಆದೇಶದಂತೆ ಹೋಟೆಲನ್ನು ಮುಚ್ಚಿಸಿದ ಘಟನೆ ಎ.11ರಂದು ಬೆಳಿಗ್ಗೆ ಪುತ್ತೂರಿನಲ್ಲಿ ನಡೆದಿದೆ.
ಮುಖ್ಯರಸ್ತೆಯ ಮಹಿಳಾ ಪೊಲೀಸ್ ಠಾಣೆಯ ಮುಂಭಾಗದ ಹಳೆಯ ಕಟ್ಟಡದಲ್ಲಿ ವ್ಯವಹರಿಸುತ್ತಿದ್ದ ನಿರಾಲ ವೆಜ್ ರೆಸ್ಟೋರೆಂಟನ್ನು ಕಾರ್ಯಾಚರಣೆ ನಡೆಸಿ ಬಂದ್ ಮಾಡಿಸಿದ್ದಾರೆ. ಈ ಹೋಟೆಲ್ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದ ಹಿನ್ನಲೆಯಲ್ಲಿ ಬಂಟ್ವಾಳ ನ್ಯಾಯಾಲಯದ ರಿಸೀವರ್ ಈ ಪ್ರಕ್ರಿಯೆ ನಡೆಸಿದ್ದು ನ್ಯಾಯಾಲಯದ ಆದೇಶದಂತೆ ನಗರ ಸಭೆ ಕಾರ್ಯಾಚರಣೆ ನಡೆಸಿದೆ.
ಹೋಟೆಲ್ ಬಂದ್ ಮಾಡಿ, ಅದರ ಕೀಲಿ ಕೈಯನ್ನು ರಿಸೀವರ್ ಕೈಗೆ ನೀಡುವಂತೆ ಬಂಟ್ವಾಳ ಜೆಎಂಎಫ್ಸಿ ನ್ಯಾಯಾಲಯ ಆದೇಶಿಸಿದ ಹಿನ್ನಲೆಯಲ್ಲಿ ಪುತ್ತೂರು ನಗರ ಸಭೆಯ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿ ಹೋಟೆಲ್ ಬಂದ್ ಮಾಡಿ ಬೀಗ ಜಡಿದಿದ್ದಾರೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಹೋಟೆಲ್ ಬಿಟ್ಟು ತೆರಳುವುದಿಲ್ಲ ಎಂದು ಹೋಟೆಲ್ ಮಾಲಕಿ ಪಟ್ಟು ಹಿಡಿದ ಘಟನೆಯೂ ನಡೆದಿದೆ. ಇದೇ ವೇಳೆ ಹೊಟೇಲ್ ಮ್ಹಾಲಕಿ, ಪೊಲೀಸರು, ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿಯು ನಡೆದಿದ್ದು ಹೊಟೇಲ್ಗೆ ಬೀಗ ಮಾತ್ರ ಹಾಕಬೇಕು. ಸೀಲ್ ಹಾಕಬಾರದು ಎಂದು ಮ್ಹಾಲಕಿಯವರು ಪಟ್ಟುಹಿಡಿದರು. ಇದಕ್ಕೆ ಒಪ್ಪಿಕೊಂಡ ಬಳಿಕ ಮ್ಹಾಲಕಿ ಹೊಟೇಲ್ನಿಂದ ಹೊರಬಂದಿದ್ದರೂ ನಂತರ ಬೀಗ ಹಾಕಿ ಸೀಲ್ ಹಾಕಲಾಗಿದೆ.
ಅಪಾಯಕಾರಿ ಕಟ್ಟಡದಲ್ಲಿ ಬಾಡಿಗೆ ನೆಲೆಯಲ್ಲಿ ವ್ಯವಹರಿಸುತ್ತಿದ್ದ ಹೊಟೇಲನ್ನು ನ್ಯಾಯಾಲಯ ಬಂದ್ ಮಾಡಲಾಗಿದೆ. ಆಕ್ಷೇಪದ ಹಿನ್ನೆಲೆಯಲ್ಲಿ ನಗರ ಸಭೆಯು ಪರವಾನಿಗೆ ನೀಡಿಲ್ಲ ಎಂದು ಹೇಳಲಾಗುತ್ತಿದ್ದರೂ ಅದೇ ಕಟ್ಟಡದಲ್ಲಿ ಇನ್ನಷ್ಟು ಅಂಗಡಿ ಮಳಿಗೆಗಳು ವ್ಯವಹರಿಸುತ್ತಿದೆ. ಆದರೆ ಅವುಗಳ ಮೇಲೆ ಯಾವುದೇ ಕ್ರಮ ವಹಿಸದೇ ಇರುವುದು ಸಾರ್ವಜನಿಕರಲ್ಲಿ ನಾನಾ ಅನುಮಾನಗಳಿಗೆ ಎಡೆಮಾಡಿದೆ.