



ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ನಾಡು ಬೊಳಂತೂರಿನಲ್ಲಿ ಯೂರಿಯಾ ರಸಗೊಬ್ಬರದ ಅಕ್ರಮ ಮರುಪೊಟ್ಟಣಿಕೆ ಜಾಲವನ್ನು ವಿಟ್ಲ ಪೊಲೀಸರು ಭೇದಿಸಿದ್ದಾರೆ.

ಜೂನ್ 11ರಂದು ಸಂಜೆ ದೊರೆತ ಖಚಿತ ಮಾಹಿತಿಯ ಮೇರೆಗೆ, ವಿಟ್ಲ ಪೊಲೀಸ್ ಠಾಣೆಯ ನಿರೀಕ್ಷಕ ಪ್ರಕಾಶ್ ದೇವಾಡಿಗ ನೇತೃತ್ವದ ತಂಡ ಬೊಳಂತೂರಿನ ಸ್ಥಳಕ್ಕೆ ದಾಳಿ ನಡೆಸಿತು.

ಪರಿಶೀಲನೆ ವೇಳೆ ಆರೋಪಿ ಮೊಹಮ್ಮದ್ ಅಶ್ರಫ್ ತನ್ನ ಮನೆಯ ಸಮೀಪ ಕೃಷಿ ಬಳಕೆಯ ಗ್ರೇಡ್ ಯೂರಿಯಾ ರಸಗೊಬ್ಬರವನ್ನು ಕೈಗಾರಿಕಾ ಬಳಕೆಯ ತಾಂತ್ರಿಕ ಗ್ರೇಡ್ ಚೀಲಗಳಿಗೆ ಮರುಪೊಟ್ಟಣಿಕೆ ಮಾಡಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಸ್ಥಳದಲ್ಲಿ ಅಂದಾಜು 632 ಚೀಲಗಳನ್ನು ಮರುಪೊಟ್ಟಣಿಕೆ ಮಾಡಿರುವುದು ಪತ್ತೆಯಾಗಿದ್ದು, ಪ್ರಕರಣದ ಕುರಿತು ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿ ನಂದನ ಶೆಣೈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅವರ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955ರ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಅಕ್ರಮವಾಗಿ ರಸಗೊಬ್ಬರ ಮರುಪೊಟ್ಟಣಿಕೆ ಮಾಡಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿರುವುದು ಕೃಷಿ ವಲಯದಲ್ಲಿ ಗಮನ ಸೆಳೆದಿದೆ.
