




ಪುತ್ತೂರು: ಬೊಳುವಾರು ಮತ್ತು ಪಡೀಲ್ ಸಂಪರ್ಕಿಸುವ ಪ್ರಮುಖ ರಸ್ತೆಯ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ರಸ್ತೆಯ ಒಂದು ಭಾಗದಲ್ಲಿ ಮಾತ್ರ ಕಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೊಂದು ಭಾಗ ಇನ್ನೂ ಅಪೂರ್ಣ ಸ್ಥಿತಿಯಲ್ಲಿದೆ. ಇದರಿಂದ ರಸ್ತೆ ಅಸಮತೋಲನಗೊಂಡು ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.


ಮಳೆಯ ಸಂದರ್ಭದಲ್ಲಿ ರಸ್ತೆಯಲ್ಲಿ ಕೆಸರು ತುಂಬಿಕೊಳ್ಳುತ್ತಿದ್ದು, ವೇಗವಾಗಿ ಸಂಚರಿಸುವ ವಾಹನಗಳಿಂದ ಕೆಸರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವ ಜನರ ಮೇಲೆ ಎರಚಿಕೊಳ್ಳುತ್ತಿದೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸ್ಥಳೀಯ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.
ಪ್ರತಿದಿನ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪುತ್ತೂರು ಸಮಗ್ರವಾಗಿ ಅಭಿವೃದ್ಧಿ ಆಗುತ್ತಿದೆ ಎಂಬುದಾಗಿ ಹೇಳಿಕೊಳ್ಳುವ ನಾಯಕರು ಬೊಳುವಾರಿನಿಂದ ಪಡೀಲಿಗೆ ಸಂಪರ್ಕ ಕಲ್ಪಿಸುವ ಕೇವಲ 2 ಕಿಲೋಮೀಟರ್ ರಸ್ತೆ ಅಭಿವೃದ್ದಿಗೆ ವರ್ಷಗಳೇ ಬೇಕಾ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪುತ್ತೂರು ಕ್ಷೇತ್ರದ ಶಾಸಕರು ಈ ಸಮಸ್ಯೆಯತ್ತ ತಕ್ಷಣ ಗಮನಹರಿಸಿ, ರಸ್ತೆ ಕಾಮಗಾರಿಯನ್ನು ವೇಗಗೊಳಿಸಿ ಜನರ ಪರದಾಟಕ್ಕೆ ಅಂತ್ಯ ಹಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
