




ಪುತ್ತೂರು, ಜೂನ್ 10: ನೀರಿನ ಮೂಲಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ತೇಲುವ ಕಸ ಸೇರುವುದನ್ನು ತಡೆದು ಜಲಚರ ಸಂರಕ್ಷಣೆ ಹಾಗೂ ನೀರಿನ ಮಾಲಿನ್ಯ ನಿಯಂತ್ರಣದ ಉದ್ದೇಶದಿಂದ ಪುತ್ತೂರು ನಗರಸಭೆಯು ಖಾಸಗಿ ಸಹಭಾಗಿತ್ವದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ರಾಜಾ ಕಾಲುವೆಯಲ್ಲಿ ಟ್ರಾಶ್ ಬ್ಯಾರಿಯರ್ ಅಳವಡಿಸಿದೆ.

ಪುತ್ತೂರಿನ ತೆಂಕಿಲ ಪ್ರದೇಶದಲ್ಲಿ ಆರಂಭವಾಗುವ ರಾಜಾ ಕಾಲುವೆಯು ಬೆದ್ರಾಳದಲ್ಲಿ ನದಿಯನ್ನು ಸೇರುತ್ತದೆ. ನಗರ ಪ್ರದೇಶದಿಂದ ಹರಿದುಬರುವ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇತರ ತೇಲುವ ಕಸಗಳು ಕಾಲುವೆಯ ಮೂಲಕ ನದಿ ಹಾಗೂ ಜಲಮೂಲಗಳನ್ನು ಸೇರಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ ನೀರಿನ ಮೇಲೆ ತೇಲುವ ಪ್ಲಾಸ್ಟಿಕ್ ಬಾಟಲಿ, ಕ್ಯಾರಿ ಬ್ಯಾಗ್, ಕಸ ಕಡ್ಡಿ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ತಡೆದು ನೀರಿನಿಂದ ಬೇರ್ಪಡಿಸುವ ಉದ್ದೇಶದಿಂದ ಟ್ರ್ಯಾಶ್ ಬ್ಯಾರಿಯರ್ ಅಳವಡಿಸಲಾಗಿದೆ.

ಈ ತಂತ್ರಜ್ಞಾನವು ಕೆರೆ, ಹಳ್ಳ, ನದಿ ಹಾಗೂ ಸಮುದ್ರದಂತಹ ನೀರಿನ ಹರಿವು ಇರುವ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಬೆಂಗಳೂರು ಹಾಗೂ ಮೈಸೂರು ಭಾಗಗಳಲ್ಲಿ ಯಶಸ್ವಿಯಾಗಿ ಬಳಕೆಯಲ್ಲಿರುವ ಈ ವ್ಯವಸ್ಥೆ ಇದೀಗ ಪುತ್ತೂರಿಗೂ ಆಗಮಿಸಿದ್ದು, ಸಮರ್ಪಕ ನಿರ್ವಹಣೆಯ ಮೂಲಕ “ಸ್ವಚ್ಛ ಪುತ್ತೂರು” ಪರಿಕಲ್ಪನೆಗೆ ಮತ್ತಷ್ಟು ಬಲ ನೀಡುವ ನಿರೀಕ್ಷೆ ವ್ಯಕ್ತವಾಗಿದೆ.
ಮಳೆಗಾಲದ ಸಂದರ್ಭದಲ್ಲಿ ಚರಂಡಿಗಳ ಮೂಲಕ ಹರಿದುಬರುವ ಪ್ಲಾಸ್ಟಿಕ್ ತ್ಯಾಜ್ಯ ತೋಡು ಹಾಗೂ ನದಿಗಳನ್ನು ಸೇರುವುದನ್ನು ಈ ವ್ಯವಸ್ಥೆ ತಡೆಯಲಿದೆ. ಈಗಾಗಲೇ ನೂರಾರು ಪ್ಲಾಸ್ಟಿಕ್ ಬಾಟಲಿಗಳು ಬ್ಯಾರಿಯರ್‌ನಲ್ಲಿ ಸಿಲುಕಿದ್ದು, ಅವುಗಳನ್ನು ಸಾಹಸ್ ಸಂಸ್ಥೆಯ ಸಿಬ್ಬಂದಿ ನಿಯಮಿತವಾಗಿ ತೆರವುಗೊಳಿಸಿ ಶುಚಿಗೊಳಿಸುತ್ತಿದ್ದಾರೆ. ಸಂಗ್ರಹವಾಗುವ ತ್ಯಾಜ್ಯವನ್ನು ಎಂ.ಆರ್.ಎಫ್. ಘಟಕದ ಮೂಲಕ ವೈಜ್ಞಾನಿಕವಾಗಿ ನಿರ್ವಹಿಸಲಾಗುತ್ತಿದೆ
ಬೆಂಗಳೂರು ಮೂಲದ ಸಾಹಸ್ ಎನ್‌ಜಿಒ ಸಂಸ್ಥೆಯ ಪಂಚಸಿರಿ ಕಾರ್ಯಕ್ರಮದಡಿ ಈ ಯೋಜನೆ ಜಾರಿಗೊಂಡಿದೆ. ಎಚ್‌ಡಿಬಿ ಫೈನಾನ್ಸಿಯಲ್ ಸರ್ವೀಸಸ್‌ನ ₹5 ಲಕ್ಷ ಸಿಎಸ್‌ಆರ್ ಅನುದಾನದ ನೆರವಿನಿಂದ ತಂತ್ರಜ್ಞಾನವನ್ನು ಸ್ಥಾಪಿಸಲಾಗಿದೆ. ಮುಂದಿನ ನಿರ್ವಹಣೆಯನ್ನು ಪುತ್ತೂರು ನಗರಸಭೆಯು ವಹಿಸಿಕೊಳ್ಳಲಿದೆ.
ಈ ಕುರಿತು ಪೌರಾಯುಕ್ತರಾದ ವಿದ್ಯಾ ಕಾಳೆ ಅವರು ಮಾತನಾಡಿ, “ಸಾಹಸ್ ಸಂಸ್ಥೆಯ ಸಹಯೋಗದಲ್ಲಿ ನೀರಿನ ಹರಿವಿನಲ್ಲಿ ಟ್ರ್ಯಾಶ್ ಬ್ಯಾರಿಯರ್ ಅಳವಡಿಸಲಾಗಿದೆ. ಆರಂಭದಲ್ಲಿ ಬೆದ್ರಾಳದಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದ್ದರೂ, ಸ್ಥಳೀಯ ತಾಂತ್ರಿಕ ಕಾರಣಗಳಿಂದ ಇದೀಗ ದೇವಸ್ಥಾನದ ಸಮೀಪ ಸ್ಥಳಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿ ನಗರಸಭಾ ವ್ಯಾಪ್ತಿಯ ಇನ್ನೂ 4ರಿಂದ 5 ಸ್ಥಳಗಳಲ್ಲಿ ಈ ತಂತ್ರಜ್ಞಾನ ಅಳವಡಿಸುವ ಗುರಿ ಹೊಂದಿದ್ದೇವೆ” ಎಂದು ತಿಳಿಸಿದ್ದಾರೆ. ಪರಿಸರ ಸಂರಕ್ಷಣೆ, ಜಲಮೂಲಗಳ ರಕ್ಷಣೆ ಹಾಗೂ ಸ್ವಚ್ಛತಾ ನಿರ್ವಹಣೆಗೆ ಪುತ್ತೂರು ನಗರಸಭೆಯ ಈ ಕ್ರಮ ಮಹತ್ವದ ಕೊಡುಗೆಯಾಗಿದೆ.
