




ಬ್ರಹ್ಮಾವರ: ತಾಲ್ಲೂಕಿನ ಕಾಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾರ್ಕೂರು – ಮಂದಾರ್ತಿ ಮುಖ್ಯರಸ್ತೆ ಸಮೀಪದ ನಡೂರು ಪುಟ್ಟುಗುಡ್ಡೆಯಿಂದ – ಕಲ್ ರಾಶಿ ರಸ್ತೆಯಲ್ಲಿ ಕಸ ಬಿಸಾಡಿ ಹೋಗುತ್ತಿದ್ದ ಮಹಿಳೆಗೆ ಐದು ಸಾವಿರ ದಂಡ ವಿಧಿಸಿದ ಘಟನೆ ನಡೆದಿದೆ.

ಕಾಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಡೂರು ಗ್ರಾಮದಲ್ಲಿ ಉಡುಪಿಯ ಸುಷ್ಮಾ ಎಂಬ ಮಹಿಳೆ ನಿರಂತರವಾಗಿ ಕಸ ಬಿಸಾಡುತ್ತಿದ್ದ ವಿಚಾರ ಗ್ರಾಮ ಪಂಚಾಯತ್ ಗಮನಕ್ಕೆ ಬಂದಿದ್ದು, ಸ್ಥಳೀಯರ ಸಹಕಾರದೊಂದಿಗೆ ಕಸ ಬಿಸಾಡುತ್ತಿದ್ದ ಮಹಿಳೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಅವರ ಮುಖಾಂತರವೇ ಕಸ ಸ್ವಚ್ಛಗೊಳಿಸಿ ಅವರಿಗೆ ಐದು ಸಾವಿರ ದಂಡ ವಿಧಿಸಿ ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ.

ಹಲವಾರು ಬಾರಿ ಗಾಂಧಿ ಗ್ರಾಮ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನವಾಗಿರುವ ಕಾಡೂರು ಗ್ರಾಮ ಪಂಚಾಯತ್ ಸ್ವಚ್ಛತೆಗೆ ಅತ್ಯಂತ ಹೆಚ್ಚು ಆದ್ಯತೆ ನೀಡುತ್ತಿದ್ದು , ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಯ ಬದಿಯಲ್ಲಿ ಕಸ ಬಿಸಾಡದಂತೆ ಮುನ್ನೆಚ್ಚರಿಕೆ ವಹಿಸುತ್ತಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲೇ ಸ್ವಚ್ಛತಾ ಸಂಕೀರ್ಣ ಹೊಂದಿರುವ ಕಾಡೂರು ಗ್ರಾಮ ಪಂಚಾಯತ್, ಪ್ರತಿ ಮನೆಗಳಿಂದ ಕಸ ಸಂಗ್ರಹಿಸಿ ಅದರ ವಿಲೇವಾರಿ ಮಾಡುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ.
ಸ್ವಚ್ಛತೆಗೆ ಗ್ರಾಮ ಪಂಚಾಯತ್ ಮಾಸ್ಟರ್ ಪ್ಲಾನ್
ಗ್ರಾಮದ ಸ್ವಚ್ಛತೆಗೆ ಮತ್ತೊಂದು ಮಾಸ್ಟರ್ ಪ್ಲಾನ್ ರೂಪಿಸಿರುವ ಕಾಡೂರು ಗ್ರಾಮ ಪಂಚಾಯತ್, ಮಾಜಿ ಅಧ್ಯಕ್ಷ ಜಲಂಧರ ಶೆಟ್ಟಿ ಅವರ ನೇತೃತ್ವದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳಿಗೆ ಅವರರ ವ್ಯಾಪ್ತಿಯ ಸಾರ್ವಜನಿಕ ರಸ್ತೆಗಳನ್ನು ನಿರಂತರವಾಗಿ ಸ್ವಚ್ಛಗೊಳಿಸುವ ಸಲುವಾಗಿ ದತ್ತು ನೀಡುವ ಮಹತ್ವಾಕಾಂಕ್ಷಿ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಇದರ ಪ್ರಕಾರ ಗ್ರಾಮದ ಪ್ರತಿ ರಸ್ತೆಯನ್ನು ಒಂದೊಂದು ಸಂಘ ಸಂಸ್ಥೆಗಳಿಗೆ ದತ್ತು ನೀಡಿ, ಆ ರಸ್ತೆಯ ಸಂಪೂರ್ಣ ಸ್ವಚ್ಛತೆಯ ಜವಾಬ್ದಾರಿಯನ್ನು ದತ್ತು ಪಡೆದ ಸಂಘ ಸಂಸ್ಥೆಗಳಿಗೆ ನೀಡುವುದು ಹಾಗೂ ಅಂತಹ ಸಂಸ್ಥೆಗಳನ್ನು ಸಾರ್ವಜನಿಕವಾಗಿ ಗೌರವಿಸುವ ಉತ್ಕೃಷ್ಟ ಯೋಜನೆ ಇದಾಗಿದೆ. ಒಂದು ವೇಳೆ ಈ ಯೋಜನೆ ಯಶಸ್ವಿಯಾದರೆ ಸ್ವಚ್ಛತೆಯಲ್ಲಿ ಕಾಡೂರು ಗ್ರಾಮ ಪಂಚಾಯತ್ ಮಹತ್ವದ ಮೈಲಿಗಳನ್ನು ತಲುಪಲಿದೆ.
