




ಪುತ್ತೂರು:2018ರಲ್ಲಿ ಸಂಪ್ಯದಲ್ಲಿ ಚರಣ್ ರಾಜ್ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಪ್ರಕರಣದ ಆರು ಮಂದಿ ಆರೋಪಿಗಳನ್ನೂ ಪುತ್ತೂರು ಜಿಲ್ಲಾ ನಾ ಯಾಲಯ ದೋಷಮುಕ್ತಗೊಳಿಸಿದೆ.

ಆರ್ಯಾಪು ಗ್ರಾಮದ ಸಂಖ್ಯೆ “ಶಾಂತರತ್ನಾ ಕಾಂಪ್ಲೆಕ್ಸ್’ ನಿವಾಸಿಯಾಗಿದ್ದ ಬಾಲಕೃಷ್ಣ ರೈ ಎಂಬವರ ಮಗ ಚರಣ್ ರಾಜ್ ರೈ(25ದ.) ರವರು ಪ್ರತ್ತೂರು ದರ್ಜೆ ಎಂಬಲ್ಲಿ ಮಾತೃಛಾಯಾ ಚಿಟ್ಸ್ ಪ್ರೈ.ಲಿ.ಸಂಸ್ಥೆಯನ್ನು ನಡೆಸಿಕೊಂಡಿದ್ದು 2018ರ ಜ.8ರಂದು ಜರಾತ್ರಿ 8 ಗಂಟೆ ಸುಮಾರಿಗೆ ಪುತ್ತೂರುನಿಂದ ಕಾರಿನಲ್ಲಿ ಬಂದಿಳಿದು ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಮಯ ಪರಿಚಯದ ಕಿಶೋರ್ ಪೂಜಾರಿ, ಪ್ರೀತಂ ಶೆಟ್ಟಿ, ಧನಂಜಯ ಶೆಟ್ಟಿ,ಮನೀಶ್ ಕುಮಾರ್, ಸುಜಿತ್ – ರಾಕೇಶ್, ಕಾರ್ತಿಕ್ ಸುವರ್ಣ, ಇತರರು ಚರಣ್ ರಾಜ್ ರೈಯವರನ್ನು ತಡೆದು ನಿಲ್ಲಿಸಿ

ಬಾಟ್ಲಿ,ಕತ್ತಿಯಿಂದ ಹಲ್ಲೆ ನಡೆಸಿ, ತುಳಿದು ಕೊಲೆಗೆ ಯತ್ನಿಸಿದ್ದರೆಂದು ಆರೋಪಿಸಲಾಗಿತ್ತು. ಆತನನ್ನು ಕೊಲ್ಲದೆ ಬಿಡಬೇಡಿ ಎಂದು ಧನಂಜಯ ಶೆಟ್ಟಿ ಬೊಬ್ಬೆ ಹಾಕಿದಾಗ ಅಲ್ಲೇ ಪಕ್ಕದಲ್ಲಿದ್ದ ರಂಜನ್, ಇತರರು ಬೊಬ್ಬೆ ಹೊಡೆಯುತ್ತಾ ಚರಣ್ ರಾಜ್ ಅವರ ಬಳಿಗೆ ಬಂದಾಗ ಆರೋಪಿಗಳು ಕೈಯಲ್ಲಿದ್ದ ಬಾಟ್ಲಿಯನ್ನು ಮನೆಯ ಮೇಲ್ಪಾವಣಿಯಿಂದ ನೋಡುತ್ತಿದ್ದವರಿಗೆ ಎಸೆದು, ಮುಂದಕ್ಕಾದರೂ ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಓಡಿ ಹೋಗಿದ್ದರು.ತಾನು ನಡೆಸುತ್ತಿದ್ದ ಮಾತೃಛಾಯಾಚಿಟ್ಸ್ ನ ಹಣ ಪಾವತಿ ಬಗ್ಗೆ ಕಿಶೋರ್ ಪೂಜಾರಿಯವರಿಗೆ ನೋಟಿಸ್ ಕಳುಹಿಸಿದ್ದ ದ್ವೇಷದಿಂದ ಆರೋಪಿಗಳು ಅಕ್ರಮ ಕೂಟ ಸೇರಿ ತನ್ನನ್ನು ಕೊಲ್ಲುವ ಉದ್ದೇಶದಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎಂದು ಚರಣ್ ರಾಜ್ ಅವರು ನೀಡಿದ್ದ ದೂರಿನ ಮೇರೆಗೆ
ಪುತ್ತೂರು ಗ್ರಾಮಾಂತರ ಪೊಲೀಸರು ಆರೋಪಿಗಳ ವಿರುದ್ಧ ಕಲಂ 143,147,148,341,3 23,324,506,307,149 ಐಪಿಸಿಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಘಟನೆ ಬಳಿಕದ ಬೆಳವಣಿಗೆಯಲ್ಲಿ ಕಾರ್ತಿಕ್ ಸುವರ್ಣ ಅವರ ಕೊಲೆ ನಡೆದಿತ್ತು. ಅವರನ್ನು ಪ್ರಕರಣದಿಂದ ಕೈ ಬಿಟ್ಟು ಇತರ ಆರು ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿತ್ತು.
ವಿಚಾರಣೆ ಪೂರ್ಣಗೊಳಿಸಿದ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸರಿತಾ ಡಿ.ಅವರು ಆರೋಪಿಗಳನ್ನು ದೋಷಮುಕ್ತಗೊಳಿಸಿ ಮಾ.25ರಂದು ತೀರ್ಪು ನೀಡಿದ್ದಾರೆ. ಆರೋಪಿಗಳ ಪರ ಖ್ಯಾತ ವಕೀಲರಾದ ಮಹೇಶ್ ಕಜೆ ಅವರು ವಾದಿಸಿದ್ದರು.ಈ ಪ್ರಕರಣದ ಆರೋಪಿಯಾಗಿದ್ದ ಕಾರ್ತಿಕ್ ಸುವರ್ಣ ಅವರ ಕೊಲೆ ಬಳಿಕ ಚರಣ್ ರಾಜ್ ರೈ ಅವರನ್ನೂ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣದ ಮೊದಲು ನಡೆದಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗಳು ಇದೀಗ ದೋಷಮುಕ್ತರಾಗಿದ್ದಾರೆ.
