




ಪುತ್ತೂರು: ಅನುಚಿತ ವರ್ತನೆ, ದೌರ್ಜನ್ಯ, ಮಾನವ ಹಕ್ಕುಗಳ ಉಲ್ಲಂಘನೆ ಸೇರಿದಂತೆ ನಾನಾ ಪ್ರಕರಣಗಳ ಕಾರಣದಿಂದಾಗಿ ಸೇವೆಯಿಂದ ಅಮಾನತುಗೊಂಡಿರುವ ಮೂಡುಬಿದರೆ ಪೆÇಲೀಸ್ ಇನ್‍ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರ ಮೇಲೆ ವೇಣೂರು ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ಕೂಡ ದಾಖಲಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಗ್ರಹಿಸಿದೆ.

ಪಕ್ಷದ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಮತ್ತು ಉಪಾಧ್ಯಕ್ಷ ರೋಷನ್ ಲೋಬೋ ಸೋಮವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಸೇವೆಯಿಂದ ಅಮಾನತುಗೊಂಡಿರುವ ಸಂದೇಶ್ ಅವರನ್ನು ಭವಿಷ್ಯದಲ್ಲಿ ಅಮಾನತು ರದ್ದಾದಲ್ಲಿ ದಕ್ಷಿಣಕನ್ನಡ ಜಿಲ್ಲೆಯಿಂದ ಹೊರಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವ ಬಗ್ಗೆ ಮತ್ತು ಮಹಿಳೆ- ಮಕ್ಕಳ ಮೇಲೆ ಹಲ್ಲೆ ಮಾಡಿರುವ ಪ್ರಕರಣದಲ್ಲಿ ಪೆÇಲೀಸ್ ಠಾಣೆಯ ಸಿ.ಸಿ. ಕ್ಯಾಮರಾ ಪರಿಶೀಲಿಸಬೇಕು. ಕಂಪೌಂಡ್ ಹಾರಿ ವಾಹನಕ್ಕೆ ತುಳಿದ ಪ್ರಕರಣದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಜನ ಸಾಮಾನ್ಯರ ಮೇಲಿನ ಪ್ರಕರಣಗಳಲ್ಲಿ ತನಿಖೆ ಮಾಡುವ ರೀತಿಯಲ್ಲೇ ಸಂದೇಶ್ ಪಿ.ಜಿ. ಅವರ ವಿರುದ್ಧದ ಪ್ರಕರಣಗಳನ್ನು ಉನ್ನತ ಮಟ್ಟದ ತನಿಖಾ ತಂಡದಿಂದ ತನಿಖೆ ನಡೆಸಬೇಕು. ಸರಿಯಾದ ರೀತಿಯಲ್ಲಿ ಸಾಕ್ಷ್ಯಗಳನ್ನು ಕಲೆ ಹಾಕಿ ಸೂಕ್ತ ತನಿಖೆ ನಡೆಸಬೇಕು.
ಈಗಾಗಲೇ ಬಿತ್ತರಗೊಂಡಿರುವ ಎಲ್ಲ ವೀಡಿಯೋ ಮತ್ತು ಆಡಿಯೋಗಳನ್ನು ವಶಕ್ಕೆ ಪಡೆದುಕೊಂಡು ಅವುಗಳನ್ನು ಎಫ್‍ಎಸ್‍ಎಲ್ ತನಿಖೆಗೆ ಕಳುಹಿಸಿ ಕೊಡಬೇಕು. ಪೆÇಲೀಸ್ ಸಮವಸ್ತ್ರ ದುರುಪಯೋಗ ಮಾಡಿಕೊಂಡಿರುವ ಇನ್‍ಸ್ಪೆಕ್ಟರ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇನ್‍ಸ್ಪೆಕ್ಟರ್ ಸಂಪತ್ತಿನ ಮೂಲವನ್ನು ತನಿಖೆಗೆ ಒಳಪಡಿಸಬೇಕು. ಅವರು ತಮ್ಮ ಪ್ರಭಾವ ಬಳಸಿಕೊಂಡು ದೂರುದಾರರಿಗೆ ತೊಂದರೆ ನೀಡುವ ಸಾಧ್ಯತೆ ಇರುವ ಕಾರಣ ಅಮಾನತು ಮುಗಿದ ನಂತರದ ದಿನಗಳಲ್ಲಿ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಬೇಕು. ಪೆÇಲೀಸ್ ಠಾಣೆಯ ಎಲ್ಲ ಕಡೆ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಿ, ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರದ ಪ್ರಕಾರ ಸಿ.ಸಿ. ಕ್ಯಾಮರಾದ ದೃಶ್ಯಾವಳಿಗಳನ್ನು 18 ತಿಂಗಳ ಕಾಲ ಸಂರಕ್ಷಿಸಿಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂದೇಶ್ ಅವರು ಈ ಹಿಂದೆ ಕಾರ್ಕಳದಲ್ಲಿ ಕರ್ತವ್ಯದಲ್ಲಿದ್ದಾಗ ಸೇವೆಯಿಂದ ಅಮಾನತುಗೊಂಡಿದ್ದರು. ಬಜಪೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಇತರರ ಮೇಲೆ ಹಲ್ಲೆ ಮಾಡಿದ ಆರೋಪವಿತ್ತು. ಬೆಳ್ತಂಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೂ ಕಿರುಕುಳ ನೀಡಿದ ಆರೋಪವಿತ್ತು. ಬಜಪೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಪಡುಪೆರಾರ, ಕಂದಾವರ, ಗುರುಪುರ ಮತ್ತು ಮುತ್ತೂರು ಗ್ರಾಮಸಭೆಗಳಲ್ಲಿ ಇವರ ವಿರುದ್ಧ ನಿರ್ಣಯ ಕೈಗೊಳ್ಳಲಾಗಿತ್ತು. ಹೀಗೆ ಹಲವು ಆರೋಪಗಳನ್ನು ಎದುರಿಸುತ್ತಿರುವ ಸಂದೇಶ್ ಪಿ.ಜಿ. ಅವರಿಗೆ ನೀಡಲಾಗಿದ್ದ ಮುಖ್ಯಮಂತ್ರಿ ಪ್ರಶಸ್ತಿಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಆರ್‍ಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನ್ನಿ ಪಿಂಟೋ, ಕಾರ್ಯದರ್ಶಿಗಳಾದ ಶಿವರಾಜು, ನಾಗರಾಜ್ ಉಪಸ್ಥಿತರಿದ್ದರು.
