


ಉಳ್ಳಾಲ: ಅರಣ್ಯಾಧಿಕಾರಿಯೋರ್ವರು ನೆಲೆಸಿದ್ದ ಬಾಡಿಗೆ ಮನೆಗೆ ಕನ್ನ ಹಾಕಿದ ಕಳ್ಳರು ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಸೇರಿದಂತೆ ಹತ್ತೂವರೆ ಲಕ್ಷ ರೂಪಾಯಿ ನಗದು ಮತ್ತು ಸುಮಾರು ಹದಿನೆಂಟು ಲಕ್ಷ ರೂ. ಬೆಲೆಬಾಳುವ 128.5 ಗ್ರಾಂ ಚಿನ್ನವನ್ನು ದೋಚಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಅಂಬಿಕಾರೋಡ್, ಕಾಪಿಕಾಡು ಎಂಬಲ್ಲಿ ನಡೆದಿದೆ.


ಕೋಟೆಕಾರು ಉಪವಲಯ ಅರಣ್ಯಾಧಿಕಾರಿ ಮೆಹಬೂಬ್ ಸಾಬ್ ಗುಡಿಹೊಲ(35) ಅವರು ವಾಸವಿದ್ದ ಅಂಬಿಕಾರೋಡ್ ಕಾಪಿಕಾಡುವಿನ ಬಾಡಿಗೆ ಮನೆಯಲ್ಲಿ ಕಳ್ಳತನ ನಡೆದಿರುವ ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಅರಣ್ಯಾಧಿಕಾರಿ ಮೆಹಬೂಬ್ ಸಾಬ್ ಅವರು ತನ್ನ ಪತ್ನಿ ಫರ್ಝಾನ ಮೆಹಬೂಬ್ ಮತ್ತು ಪುಟ್ಟ ಮಗುವಿನೊಂದಿಗೆ ಕಾಪಿಕಾಡುವಿನ ಬಾಡಿಗೆ ಮನೆಯಲ್ಲಿ ಕಳೆದ ಆರು ತಿಂಗಳುಗಳಿಂದ ವಾಸವಿದ್ದರು. ಕಳೆದ ಶುಕ್ರವಾರ ಮಧ್ಯಾಹ್ನದಂದು ಮೆಹಬೂಬ್ ಅವರು ಕುಟುಂಬದೊಂದಿಗೆ ತನ್ನ ಊರು ಕೊಪ್ಪಳಕ್ಕೆ ತೆರಳಿದ್ದರು.ಗುರುವಾರ ಬೆಳಿಗ್ಗೆ ಒಂಭತ್ತು ಗಂಟೆ ವೇಳೆಗೆ ಮೆಹಬೂಬ್ ಅವರು ತನ್ನ ಕುಟುಂಬ ಸಮೇತ ಕಾಪಿಕಾಡುವಿನ ಮನೆಗೆ ಮರಳಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಮನೆಯ ಮುಖ್ಯ ಬಾಗಿಲಿನ ಚಿಲಕ ಮುರಿದು ಒಳ ನುಗ್ಗಿದ ಕಳ್ಳರು ಹಾಲ್ ಮತ್ತು ಎರಡು ಕೋಣೆಯೊಳಗಿನ ಕಬಾಟುಗಳನ್ನ ಜಾಲಾಡಿದ್ದು, ಲಾಕರ್ ಗಳಲ್ಲಿದ್ದ ಪತ್ನಿ ಮತ್ತು ಮಗುವಿನ ಚಿನ್ನದ ಆಭರಣಗಳು ಹಾಗೂ ಮೆಹಬೂಬ್ ಅವರು ಬ್ಯಾಂಕಿಂದ ಸಾಲ ಪಡೆದಿದ್ದ ಹತ್ತೂವರೆ ಲಕ್ಷ ರೂಪಾಯಿ ನಗದನ್ನ ದೋಚಿದ್ದಾರೆ. ಕಬಾಟಿನ ಒಂದು ಲಾಕರಲ್ಲಿ ಬೆಳೆಬಾಳುವ ಬೆಳ್ಳಿ ಆಭರಣಗಳಿದ್ದರೂ ಸಹ ಕಳ್ಳರು ಅದನ್ನು ಬಿಟ್ಟು ಹೋಗಿದ್ದಾರೆ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ.
