




ಈ ಹಿಂದೆ ಕರಾವಳಿ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಕಟ್ಟಡಗಳನ್ನು ನಿರ್ಮಿಸಬೇಕಾದಲ್ಲಿ ಸ್ಥಳೀಯ ಸಂಸ್ಥೆಯಾದ ಗ್ರಾಮ ಪಂಚಾಯತಿಯಿಂದ ಕಡ್ಡಾಯವಾಗಿ ಅನುಮತಿ ಪಡೆದು ಕಟ್ಟಡವನ್ನು ನಿರ್ಮಿಸಬಹುದಿತ್ತು,ರಾಜ್ಯ ಸರ್ಕಾರದ ಸುತ್ತೋಲೆ ದಿನಾಂಕ 06-04 2009 ರಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಸ್ವತ್ತುಗಳು ಭೂ ಪರಿವರ್ತನೆಯಾದ ನಂತರ ನಿವೇಶನ ನಕ್ಷೆಗಳಿಗೆ ವಿನ್ಯಾಸ ಅನುಮೋದನೆ (Lay out Plan Approval ) ನೀಡುವ ಅಧಿಕಾರ ಇದ್ದದ್ದು ಸ್ಥಳೀಯ ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸ್ಥಳೀಯ ಯೋಜನಾ ಪ್ರಾಧಿಕಾರಗಳು ಇಲ್ಲದಿರುವ ಪ್ರದೇಶಗಳಲ್ಲಿ ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯ ನಿರ್ದೇಶಕರ ಅನುಮೋದನೆ ಪಡೆಯಬೇಕಿತ್ತು. ಸದರಿ ಸುತ್ತೋಲೆಯಂತೆ ಗ್ರಾಮ ಪಂಚಾಯತಿಗಳಿಗೆ ವಿನ್ಯಾಸ ನಕ್ಷೆ ಅನುಮೋದನೆ ನೀಡುವ ಅಧಿಕಾರ ಇರಲಿಲ್ಲ. ಒಂದು ವೇಳೆ ಅನುಮೋದನೆ ನೀಡಿದ್ದಲ್ಲಿ ಅದು ಕಾನೂನುಬಾಹಿರವಾಗಿರುತ್ತದೆ. ಗ್ರಾಮ ಪಂಚಾಯತಿಗಳಲ್ಲಿ ನಮೂನೆ 9& 11 A ಯನ್ನು ಕೈಬರಹದ ಮುಖಾಂತರ ಹಾಗೂ ಹಳೆಯ ನಮೂನೆಯಲ್ಲಿ ನೀಡಲಾಗುತ್ತಿತ್ತು.

ಕರ್ನಾಟಕ ಸರ್ಕಾರದ ಸುತ್ತೋಲೆ ಸಂಖ್ಯೆ ಸಂ ಗ್ರಾ ಅ ಪ 83 ಗ್ರಾ ಪಂ ಅ 2013 ದಿನಾಂಕ 15-06-2013 ರಂತೆ ರಾಜ್ಯದ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 9 & 11 A ಯನ್ನು ಆನ್ಲೈನ್ ಮೂಲಕ ವಿತರಿಸುವ ಸಲುವಾಗಿ ಇ – ಸ್ವತ್ತು ತಂತ್ರಾಂಶವನ್ನು ಜಾರಿಗೊಳಿಸಲಾಯಿತು. ಕೈಬರಹದ ಮುಖಾಂತರ ಹಾಗೂ ಹಳೆಯ ನಮೂನೆಯಲ್ಲಿ ನಮೂನೆ 9 &11A ವಿತರಿಸುವ ಪದ್ಧತಿಯನ್ನು ತಕ್ಷಣ ದಿಂದಲೇ ರದ್ದುಗೊಳಿಸಲಾಯಿತು.( ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರನ್ವಯ ಕಂದಾಯ ಇಲಾಖೆಯಿಂದ ಭೂ ಪರಿವರ್ತನೆಗೊಳಿಸಿದ ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ-1961ರಂತೆ ಸಕ್ಷಮ ಯೋಜನಾ ಪ್ರಾಧಿಕಾರವು ಅನುಮೋದಿಸಿದ ಬಡಾವಣೆಗಳಿಗೆ ಮಾತ್ರ ಕೈಬರಹದ ನಮೂನೆ 9 & 11 A ನೀಡಲು ಅವಕಾಶವಿತ್ತು.

ನಂತರ ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಗ್ರಾ ಅ ಪ 86 ಗ್ರಾಪಂಅ 2014 ದಿನಾಂಕ 11-11-2014 ರಂತೆ ಸ್ಥಳೀಯ ಯೋಜನಾ ಪ್ರದೇಶದ ಹೊರಭಾಗದಲ್ಲಿನ ಒಂದೇ ಎಕರೆಗಿಂತ ಕಡಿಮೆ ಇರುವ ಏಕ ನಿವೇಶನ ಮತ್ತು ಬಹು ನಿವೇಶನ ವಸತಿ / ವಸತಿಯೇತರಿಗಾಗಿ ಭೂ ಪರಿವರ್ತತ ಜಮೀನುಗಳಲ್ಲಿನ ವಿನ್ಯಾಸ ನಕ್ಷೆ ಅನುಮೋದನೆ ನೀಡುವ ಅಧಿಕಾರವನ್ನು ತಾಲೂಕು ಪಂಚಾಯತಿಗೆ ನೀಡಲಾಯಿತು.
(ಗಮನಿಸಿ – ಒಂದು ಎಕರೆಗಿಂತ ಹೆಚ್ಚಿನ ಪ್ರದೇಶ ಅಥವಾ ಬಹುನಿವೇಶನ ಬಡಾವಣೆಗಳಿಗೆ ವಿನ್ಯಾಸ ಅನುಮೋದನೆ ನೀಡುವ ಅಧಿಕಾರ ಇರುವುದು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮಾತ್ರ )
ನಂತರ ಕರ್ನಾಟಕ ಸರ್ಕಾರದ ಸುತ್ತೋಲೆ ಸಂಖ್ಯೆ ಗ್ರಾಅಪ 132 ಗ್ರಾಪಂಅ 2015 ದಿನಾಂಕ 19-03 – 2015 ರಂತೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸ್ಥಳೀಯ ಯೋಜನಾ ಪ್ರದೇಶದ ಹೊರಭಾಗದಲ್ಲಿನ ಜಮೀನಿನ ವಿಸ್ತೀರ್ಣವು 1000 ಚದರ ಮೀಟರ್ (0.10 ಹೆಕ್ಟೆರ್ಸ್ ) ಅಥವಾ ಕಡಿಮೆ ಇದ್ದಲ್ಲಿ ಏಕ ನಿವೇಶನ ವಸತಿ ಮತ್ತು ವಸತಿಯೇತರಿಗಾಗಿ ಭೂ ಪರಿವರ್ತತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಯನ್ನು ಮಾಡಲು ಗ್ರಾಮ ಪಂಚಾಯತಿಗಳಿಗೆ ಅಧಿಕಾರ ನೀಡಲಾಯಿತು. 1000 ಚದರ ಮೀಟರ್ ಗಿಂತ ಒಂದು ಎಕ್ರೆವರೆಗಿನ ಏಕ ಮತ್ತು ಬಹು ನಿವೇಶನ ವಿನ್ಯಾಸ ಅನುಮೋದನೆಯನ್ನು ತಾಲೂಕು ಪಂಚಾಯತಿಗಳು ಮಾಡಬಹುದೆಂದು ತಿಳಿಸಲಾಯಿತು. ಸಾರ್ವಜನಿಕರ ಸಮಸ್ಯೆಗಳು ಹೆಚ್ಚಾಗಿ ಸರಕಾರಕ್ಕೆ ಬಂದ ಮನವಿಗಳನ್ನು ಪರಿಗಣಿಸಿದ ಸರ್ಕಾರ ಆದೇಶ ಸಂಖ್ಯೆ ಗ್ರಾ ಅ ಪ 266 ಗ್ರಾ ಪಂ ಅ 2015 ದಿನಾಂಕ 13-01-2016 ರಂತೆ ದಕ್ಷಿಣ ಕನ್ನಡ,ಉಡುಪಿ, ಉತ್ತರಕನ್ನಡ, ಶಿವಮೊಗ್ಗ,ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಈ ಸ್ವತ್ತು ತಂತ್ರಾಂಶದಿಂದ ತಾತ್ಕಾಲಿಕವಾಗಿ ವಿನಾಯಿತಿ ನೀಡಿ ಮುಂದಿನ ಆದೇಶದವರೆಗೆ ಕೈಬರಹದಲ್ಲಿ ನೀಡಲು ಆದೇಶಿಸಲಾಯಿತು.ನಂತರ ದಿನಾಂಕ 21-12-2016 ರ ಸರ್ಕಾರದ ಸುತ್ತೋಲೆಯಂತೆ ಸದರಿ ಹಿಂದಿನ ಆದೇಶವನ್ನು ಹಿಂಪಡೆಯಲಾಯಿತು. ತದನಂತರ ಗ್ರಾಮೀಣ ಭಾಗದಲ್ಲಿ 1000 ಚದರ ಮೀಟರ್ ಗಿಂತ ಕಡಿಮೆ ಪ್ರದೇಶದ ಏಕ ನಿವೇಶನ ವಸತಿ ಮತ್ತು ಇತರ ಉದ್ದೇಶದ ವಿನ್ಯಾಸ ಅನುಮೋದನೆಯನ್ನು ಗ್ರಾಮ ಪಂಚಾಯತಿಗಳು, 1000 ಚದರ ಮೀಟರ್ ಗಿಂತ ಹೆಚ್ಚಿನ ಆದರೆ ಒಂದು ಎಕರೆಗಿಂತ ಕಡಿಮೆ ಇರುವ ವಿಸ್ತೀರ್ಣದ ಏಕ ನಿವೇಶನ ಮತ್ತು ಒಂದು ಎಕರೆವರೆಗಿನ ಬಹುನಿವೇಶನದ ವಿನ್ಯಾಸ ಅನುಮೋದನೆಯನ್ನು ತಾಲೂಕು ಪಂಚಾಯತಿ, ಒಂದು ಎಕರೆಗಿಂತ ಹೆಚ್ಚಿನ ನಿವೇಶನದ ವಿನ್ಯಾಸ ಅನುಮೋದನೆಯನ್ನು ಸಹಾಯಕ ನಿರ್ದೇಶಕರು ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರ ಮತ್ತು ಸ್ಥಳೀಯ ಯೋಜನಾ ಪ್ರದೇಶ ವ್ಯಾಪ್ತಿಯಲ್ಲಿನ ನಿವೇಶನಗಳಿಗೆ ವಿನ್ಯಾಸ ಅನುಮೋದನೆ ನೀಡುವ ಅಧಿಕಾರ ಸ್ಥಳೀಯ ನಗರ ಯೋಜನಾ ಪ್ರಾಧಿಕಾರಗಳಿಗೆ ಇದೆ.
ಗ್ರಾಮೀಣ ಮತ್ತು ನಗರ ಭಾಗದಲ್ಲಿ ನಿವೇಶನದ ವಿನ್ಯಾಸ ಅನುಮೋದನೆ ನೀಡುವ ಅಧಿಕಾರವನ್ನು ಸರ್ಕಾರವು ಕಾಲ ಕಾಲಕ್ಕೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರ, ಸ್ಥಳೀಯ ನಗರ ಯೋಜನ ಪ್ರಾಧಿಕಾರಗಳಿಗೆ ನೀಡಿದೆ. ಆದರೆ ಸದರಿ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಮಟ್ಟದ ಜವಾಬ್ದಾರಿಯನ್ನು ಹೊಂದಿರುವ ಅಧಿಕಾರಿಗಳು ಲಂಚ ಹಣದ ಆಸೆಗಾಗಿ ಮಧ್ಯವರ್ತಿಗಳೊಂದಿಗೆ ಆಪವಿತ್ರ ಮೈತ್ರಿ ಬೆಳೆಸಿಕೊಂಡು ಮತ್ತು ಇನ್ನಿತರ ಒತ್ತಡಗಳಿಗೆ ಮಣಿದು ತನ್ನ ಅಧಿಕಾರ ವ್ಯಾಪ್ತಿ ಮೀರಿ ವಿನ್ಯಾಸ ಅನುಮೋದನೆ ನೀಡಿ ಸರ್ಕಾರದ ಕಾನೂನು ಬಗೆಗಿನ ಸಾರ್ವಜನಿಕರ ಮಾಹಿತಿ ಕೊರತೆಯ ಲಾಭವನ್ನು ಪಡೆದು ಸಾರ್ವಜನಿಕರನ್ನು ವಂಚಿಸುವ ಕೆಲಸ ಅವ್ಯಾಹತವಾಗಿ ನಡೆಯುತ್ತಾ ಬಂದಿದೆ.
ನಿರೀಕ್ಷಿಸಿ………
ಹೆಚ್ಚಿನ ಮಾಹಿತಿ ಮುಂದಿನ ಭಾಗದಲ್ಲಿ…..
