




ಮಂಗಳೂರು: ಹೀಗೆ ಮುಖ ಮುಚ್ಚಿಕೊಂಡು ಮಾಧ್ಯಮದ ಮುಂದೆ ಬಂದ ಈಕೆ ವೃತ್ತಿಯಲ್ಲಿ ಬ್ಯೂಟಿಷಿಯನ್. ಈಕೆ ಕೆಲಸ ಮಾಡುವ ಸೆಲೂನ್‌ನಲ್ಲಿ ಬ್ಯೂಟಿ ಪಾರ್ಲರ್ ನೆಪದಲ್ಲಿ ಸೆಕ್ಸ್ ದಂಧೆ ನಡೆಯುತ್ತಿದೆ. ಪುರುಷ ಗಿರಾಕಿಗಳೊಂದಿಗೆ ಸಹಕರಿಸಲು ಮಾಲಕಿಯೇ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಹಲ್ಲೆಗೈದು ಅರೆನಗ್ನ ಫೋಟೊ ತೆಗೆದು ಬೆದರಿಕೆ ಒಡ್ಡಿದ್ದಾರೆಂದು ಈಕೆ ಮಾಧ್ಯಮದ ಮುಂದೆ ಬಂದು ಅಳಲು ತೋಡಿಕೊಂಡಿದ್ದಾರೆ.

ಹೌದು.. ಮಂಗಳೂರಿನ ಹಂಪನಕಟ್ಟೆಯ ವೈಬ್ಸ್ ಯೂನಿಸೆಕ್ಸ್ ಸೆಲೂನ್‌ನಲ್ಲಿ ಈ ಸೆಕ್ಸ್ ದಂಧೆ ನಡೆಯುತ್ತಿದೆ. ಮಾಲಕಿ ತೃಪ್ತಿ ಭಂಡಾರಿ ಹಾಗೂ ಆಕೆಯ ಪತಿ ವಿಪಿನ್ ಭಂಡಾರಿಯೇ ಈ ಸೆಕ್ಸ್‌ದಂಧೆಯ ರೂವಾರಿಗಳು. ಇಲ್ಲಿನ ಮಹಿಳಾ ಸಿಬ್ಬಂದಿಗೆ ಪುರುಷ ಗಿರಾಕಿಗಳು ಬಂದಲ್ಲಿ ಅವರಿಗೆ ಮಸಾಜ್, ಮತ್ತೊಂದು ಮಾಡಬೇಕು ಎಂದು ಮಾಲಕರು ಒತ್ತಾಯಿಸುತ್ತಾರೆ. ಮಾಡುವುದಿಲ್ಲ ಎಂದರೂ ಬೆದರಿಸಿ ಮಸಾಜ್ ಮಾಡುವಂತೆ ಮಾಡುತ್ತಾರೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.

ಬೇರೆ ದಾರಿ ಕಾಣದೆ ಇತ್ತೀಚೆಗೆ ಸಂತ್ರಸ್ತೆ ಬ್ಯೂಟಿ ಪಾರ್ಲರ್ ಒಳಗಿನ ಏಕಾಂತ ಕೊಠಡಿಗೆ ಮಸಾಜ್ ಮಾಡಲು ಹೋಗಿದ್ದಾರೆ. ಈ ವೇಳೆ ಪುರುಷ ಗಿರಾಕಿ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಾನೆ. ಇದಕ್ಕೆ ಒಪ್ಪದೆ ತಾನು ಅಲ್ಲಿಂದ ಹೊರಬರಲು ಯತ್ನಿಸಿದಾಗ ಮಾಲಕಿ ತೃಪ್ತಿ ಭಂಡಾರಿ ಕೊಠಡಿಯೊಳಗೆ ನುಗ್ಗಿ ತನ್ನ ಕಪಾಳಕ್ಕೆ ಬಾರಿಸಿದ್ದಾರೆ. ಅಲ್ಲದೆ, ಬಲವಂತವಾಗಿ ಮೇಲುಡುಪು ಕಳಚಿ ತನ್ನ ಅರೆನಗ್ನ ಫೋಟೊ ತೆಗೆದಿದ್ದಾರೆ. ಈ ಫೋಟೊವನ್ನು ತನ್ನ ಪತಿಗೆ ಕಳುಹಿಸಿದ್ದಾರೆ. ಇದರಿಂದ ಪತಿ ತನಗೆ ವಿಚ್ಛೇದನ ನೀಡುವಲ್ಲಿವರೆಗೆ ಬಂದಿದೆ ಎಂದು ಸಂತ್ರಸ್ತೆ ಹೇಳಿದ್ದಾರೆ.
ಸದ್ಯ ಸಂತ್ರಸ್ತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿಯವರಲ್ಲಿ ಈ ವಿಚಾರ ತಿಳಿಸಿದ್ದು, ಅದರಂತೆ ದೂರು ದಾಖಲಾಗಿದೆ. ಶುಕ್ರವಾರ ಮಧ್ಯಾಹ್ನದವರೆಗೆ ಎಫ್ಐಆರ್ ದಾಖಲಿಸದ ಪೊಲೀಸರು, ಸಂತ್ರಸ್ತೆ ಮಾಧ್ಯಮದ ಮುಂದೆ ಬಳಿಕ ಪ್ರಕರಣ ದಾಖಲಿಸಿದ್ದಾರೆ.
ಸಂಜೆ ವೇಳೆ ಸಂತ್ರಸ್ತೆಯೊಂದಿಗೆ ಮಹಿಳಾ ಪೊಲೀಸರು ಬೆರಳಚ್ಚು ತಜ್ಞರೊಂದಿಗೆ ಆಗಮಿಸಿ ಸೆಲೂನ್‌ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಈ ಬಗ್ಗೆ ಕಠಿಣ ಕ್ರಮ ಕೈಗೊಂಡು ಸೆಲೂನ್‌ಗೆ ಬೀಗ ಜಡಿಯಬೇಕಿದೆ.
