




ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರ ತಿಳಿಸಿರುವ 11ನೇ ಸ್ಥಳದಲ್ಲಿ ಇಂದು ಉತ್ಖನನ ಕಾರ್ಯ ಮುಂದುವರಿದಿದೆ. ಪ್ರಕರಣ ದಿನ ದಿನವೂ ರೋಚಕ ತಿರುವು ಪಡೆಯುತ್ತಿದ್ದು, ಅನನ್ಯಾ ಭಟ್ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಹೇಳಿಕೆ ಮತ್ತೆ ಗೊಂದಲಕ್ಕೆ ಕಾರಣವಾಗಿದೆ.

ಈ ಮೂಲಕ ನಿನ್ನೆಯ ಅಂದರೆ 7ನೇ ದಿನದ ಉತ್ಖನನದಲ್ಲಿ ಸಿಕ್ಕಿದ್ದು ಒಂದಲ್ಲ… ಮೂರು ಅಸ್ಥಿಪಂಜರ ಎಂದು ದೂರುದಾರೆ ಸುಜಾತ ಭಟ್ ಪರ ವಕೀಲ ಮಂಜುನಾಥ್ ಸ್ಪೋಟಕ ಮಾಹಿತಿ ನೀಡಿದ್ದಾರೆ.

ಪಾಯಿಂಟ್ ಹನ್ನೊಂದರ 100 ಮೀಟರ್ ಅಂತರದಲ್ಲಿ ಮೂರು ಮಾನವ ಅಸ್ಥಿಪಂಜರ ಅವಶೇಷಗಳು ಲಭ್ಯವಾಗಿದೆ. ಈ ಪೈಕಿ ಒಂದು ಕಳೇಬರ ಮಹಿಳೆಗೆ ಸೇರಿದ್ದಾಗಿದೆ. ಇದರೊಂದಿಗೆ ಮಹಿಳೆಯ ಸೀರೆಯೂ ಪತ್ತೆಯಾಗಿದೆ ಎಂದಿದ್ದಾರೆ.
ನಿನ್ನೆ ಪಾಯಿಂಟ್ ನಂ. 11ರ ಬದಲು ಅಲ್ಲಿಯೇ ನೂರು ಮೀಟರ್ ಅಂತರದಲ್ಲಿರುವ ಹೊಸ ಸ್ಥಳದಲ್ಲಿ ಉತ್ಖನನ ಕಾರ್ಯ ನಡೆದಿತ್ತು. ಎಸ್ಐಟಿ ಅನಾಮಿಕ ದೂರುದಾರನಿಗೆ ಹೊಸ ಜಾಗ ತೋರಿಸಲು ಅವಕಾಶ ನೀಡಿದೆ. ಇದರಿಂದ ನಿನ್ನೆ ಮೃತದೇಹದ ಕಳೇಬರ ಅಗೆಯುವ ಕಾರ್ಯ ಯಶಸ್ವಿಯಾಗಿತ್ತು. ಎಸ್ಐಟಿ ಸಹಿತ ಶೋಧ ನಡೆಸುತ್ತಿರುವ ತಂಡದ ಕಾರ್ಯಾಚರಣೆ ಶ್ಲಾಘನೀಯ ಎಂದು ವಕೀಲ ಮಂಜುನಾಥ್ ತಮ್ಮ ಪ್ರಕಟಣೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
