



ಬೆಂಗಳೂರು: ಬೈರತಿ ಬಸವರಾಜ್ ವಿರುದ್ಧ ಕೊಲೆ ಕೇಸ್, ಎಫ್‌ಐಆರ್ ದಾಖಲಾಗಿದ್ದಕ್ಕೆ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ ಸೋಮಣ್ಣ, ಬೈರತಿ ಬಸವರಾಜ್ ಆರೋಪಿಯೇ ಹೊರತು ಅಪರಾಧಿ ಅಲ್ಲ. ಅವರು ಆ ತರಹದ ಅವಿವೇಕದ ಕೆಲಸ ಮಾಡೋರಲ್ಲ. ಇಷ್ಟು ಕೀಳುತನಕ್ಕೆ ಇಳಿಯಲ್ಲ. ಇದು ಸುಳ್ಳು ಕೇಸ್, ಅವರು ನಿರ್ದೋಷಿಯಾಗಿ ಹೊರಗೆ ಬರುತ್ತಾರೆ ಅನ್ನೋ ವಿಶ್ವಾಸ ಇದೆ. ಕಾನೂನು ಮೀರಿ ಒಬ್ಬ ಜನಪ್ರತಿನಿಧಿಗೆ ಸರ್ಕಾರ ತೊಂದರೆ ಕೊಡಬಾರದು. ಹೊಟ್ಟೆಕಿಚ್ಚಿಗೋಸ್ಕರ ಬೈರತಿ ಮೇಲೆ ಗೂಬೆ ಕೂರಿಸಿದ್ದಾರೆ ಎಂದು ಕಿಡಿಕಾರಿದರು.

ಇನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬೈರತಿ ಬಸವರಾಜ್ ಅವರನ್ನು ಉದ್ದೇಶಪೂರ್ಕವಾಗಿ ಸಿಲುಕಿಸಲು ಎರಡೆರಡು ಎಫ್‌ಐಆರ್ ಹಾಕಿದ್ದಾರೆ. ಇದು ಸರ್ಕಾರದ ಮಸಲತ್ತು. ಮೊದಲ ಕಾಪಿಯಲ್ಲಿ ಬೈರತಿ ಬಸವರಾಜ್ ಹೆಸರಿಲ್ಲ. ಎರಡನೇ ಎಫ್‌ಐಆರ್‌ನಲ್ಲಿ ವಿಜಯಲಕ್ಷ್ಮಿ ಅವರು ಬೈರತಿ ಬಸವರಾಜ್ ಹೆಸರು ಹೇಳಿದ್ದಾರೆ ಎಂದು ಪೊಲೀಸರು ಬರೆದುಕೊಂಡಿದ್ದಾರೆ. ಒಂದೇ ಠಾಣೆಯಲ್ಲಿ ಎರಡೆರಡು ಎಫ್‌ಐಆರ್ ಹೇಗೆ ದಾಖಲಾದವು? ಯಾಕೆ ದಾಖಲಾಯಿತು? ಇದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ವಾಗ್ದಾಳಿ ನಡೆಸಿದರು.
