



ಮೈಸೂರು ನಗರದ ರಾಮಾನುಜ ರಸ್ತೆಯ 12ನೇ ಕ್ರಾಸ್ನಲ್ಲಿ ಗುರುವಾರ ರಾತ್ರಿ ನಡೆದ ಭೀಕರ ಹಲ್ಲೆಯಿಂದ ಜನಗರದ ಜನ ಬೆಚ್ಚಿ ಬಿದ್ದಿದ್ದಾರೆ. ರಾತ್ರಿ 9.20 ಕ್ಕೆ ಆಟೋದಲ್ಲಿ ಹೋಗುತ್ತಿದ್ದವರನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಅಡ್ಡಹಾಕಿದ ದುಷ್ಕರ್ಮಿಗಳು ಏಕಾಏಕಿ ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಘಟನೆಯ ಸಿಸಿಟಿವಿ ವಿಡಿಯೋ ಈಗ ವೈರಲ್ ಆಗುತ್ತಿದೆ.


ಅಗ್ರಹಾರ ರಸ್ತೆಯ ಜನದಟ್ಟಣೆ ಇರುವ ರಾಮಾನುಜಾ ರಸ್ತೆಯಲ್ಲಿ ಆಟೋ ಒಂದು ಅದರ ಪಾಡಿಗೆ ಹೋಗುತ್ತಾ ಇರುತ್ತದೆ. ಆಟೋವನ್ನೇ ಹಿಂಬಾಲಿಸಿಕೊಂಡು ಬಂದ ಕಪ್ಪು ಬಣ್ಣದ ಕಾರು ಏಕಾಏಕಿ ಆಟೋವನ್ನು ಅಡ್ಡಹಾಕಿದೆ. ಅಷ್ಟರಲ್ಲಾಗಲೇ ಮಚ್ಚು ಸಮೇತ ಕಾರಿನಿಂದ ಇಳಿದು ಬಂದು, ಆಟೋದೊಳಗಿದ್ದವರ ಮೇಲೆ ಮನಬಂದಂತೆ ಮಚ್ಚು ಬೀಸಿದ್ದಾರೆ. ಸ್ಥಳೀಯರು ಅದೇನಾಗುತ್ತದೆ ಎಂದು ನೋಡುವಷ್ಟರಲ್ಲಿ ಆಟೋದೊಳಗಿದ್ದ ಮೂವರು ಮಹಿಳೆಯರು ಹಾಗೂ ಒಬ್ಬ ಯುವಕನ ಮೇಲೆ ಯದ್ವಾತದ್ವಾ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ. ನಂತರ ಅದೇ ಕಾರಿನಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

