



ಕುಕ್ಕೆ ಸುಬ್ರಹ್ಮಣ್ಯ: ಕೇಂದ್ರದ ಪ್ರಸಾದ ಯೋಜನೆಗೆ ರಾಜ್ಯದ 54 ದೇವಸ್ಥಾನಗಳ ಪಟ್ಟಿ ಕಳುಹಿಸಲಾಗಿದೆ. ಪ್ರಸಾದ ಯೋಜನೆ ದೇಶಾದ್ಯಂತ ಇದ್ದು, ಅದರಡಿ ರಾಜ್ಯದ ನಾಲ್ಕು ದೇವಸ್ಥಾನಗಳಿಗೆ ಅನುದಾನ ಬಂದಿದೆ. ಮೈಸೂರಿಗೆ 30 ಕೋಟಿ ರೂ., ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ 32 ಕೋಟಿ ರೂ., ಇತರ 2 ದೇವಸ್ಥಾನಗಳಿಗೆ 15 ಲಕ್ಷ ರೂ. ಬಂದಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಸಚಿವರು ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಮಾಸ್ಟರ್‌ಪ್ಲಾನ್ ಸಭೆ ನಡೆಸಿದರು. ಸಭೆಯಲ್ಲಿ 3ನೇ ಹಂತದ ಮಾಸ್ಟರ್‌ಪ್ಲಾನ್ ಯೋಜನೆಯ ಕಾಮಗಾರಿಗಳ ಬಗ್ಗೆ, ದೇವಸ್ಥಾನದ ಸುತ್ತು ಪೌಳಿ, ಪಾರಂಪರಿಕ ಶೈಲಿಯ ರಥಬೀದಿ, 5 ಸಾವಿರ ಮಂದಿಗೆ ಏಕ ಕಾಲದಲ್ಲಿ ಕುಳಿತು ಭೋಜನ ಪ್ರಸಾದ ಸ್ವೀಕರಿಸುವ ಕೊಠಡಿ, ವಸತಿ ಕಟ್ಟಡ, ಸಿಬಂದಿ ವಸತಿಗೃಹ ಮತ್ತಿತರ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಬಳಿಕ ಸಚಿವರು ಇಂಜಾಡಿ, ಆದಿ ಸುಬ್ರಹ್ಮಣ್ಯ, ಹೊಸ ಆಶ್ಲೇಷಾ ಬಲಿ ಪೂಜಾ ಮಂದಿರ ನಿರ್ಮಾಣವಾಗಲಿರುವ ಸ್ಥಳ, ಎಸ್‌ಎಸ್‌ಪಿಯು ಕಾಲೇಜಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬಳಿಯ ಆದಿ ಸುಬ್ರಹ್ಮಣ್ಯ ರಸ್ತೆಯ ತುಳಸಿತೋಟ ಎಂಬಲ್ಲಿ ದಾನಿಗಳಾದ ಮಾಜಿ ಸಚಿವ ಮಾಲೂರು ಎಸ್.ಎನ್.
ಕೃಷ್ಣಯ್ಯ ಶೆಟ್ಟಿ ಅವರ ವತಿಯಿಂದ ನಿರ್ಮಾಣವಾಗಲಿರುವ ಆಶ್ಲೇಷಾ ಬಲಿ ಪೂಜಾ ಮಂದಿರದ ನಿರ್ಮಾಣ ಕಾಮಗಾರಿಗೆ ದಾನಿಗಳಿಗೆ ಸಚಿವ ರೆಡ್ಡಿ ಆದೇಶ ಪತ್ರ ಹಸ್ತಾಂತರಿಸಿದರು ಹಾಗೂ ದಾನಿಗಳನ್ನು ಗೌರವಿಸಿದರು.

