



ಬಂಟ್ವಾಳ: ಹಾಸನದಿಂದ ಮಂಗಳೂರು ಕಡೆಗೆ ಕಾರಿನಲ್ಲಿ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಒಟ್ಟು ₹1,05,59,450 ಮೌಲ್ಯದ ಮಾದಕವಸ್ತು ಹಾಗೂ ಇತರೆ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ಆ.16ರಂದು ತಡರಾತ್ರಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಮಂಜುನಾಥ ಟಿ. ಅವರಿಗೆ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಮಾದಕವಸ್ತು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ KA-01-MA-1284 ನೋಂದಣಿಯ ಕಾರನ್ನು ತಡೆದು ಪರಿಶೀಲಿಸಿದರು.

ಕಾರಿನ ಚಾಲಕನಾಗಿದ್ದ ಬೆಂಗಳೂರು ಕೆಂಗೇರಿ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್ (35) ಎಂಬಾತನನ್ನು ವಿಚಾರಣೆ ನಡೆಸಿದಾಗ, ಕಾರಿನಲ್ಲಿ ಮಾದಕವಸ್ತು ಸಾಗಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಕಾರನ್ನು ತಪಾಸಣೆ ನಡೆಸಿದಾಗ 538.63 ಗ್ರಾಂ MDMA ಹಾಗೂ 99.12 ಗ್ರಾಂ ಕೊಕೈನ್ ಪತ್ತೆಯಾಗಿದೆ. ಇದರೊಂದಿಗೆ ಖಾಲಿ ಪ್ಲಾಸ್ಟಿಕ್ ಡಬ್ಬಿಗಳು, ಡಿಜಿಟಲ್ ತೂಕದ ಯಂತ್ರ ಸೇರಿದಂತೆ ಇತರೆ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ MDMA ಮೌಲ್ಯ ₹53,86,300 ಹಾಗೂ ಕೊಕೈನ್ ಮೌಲ್ಯ ₹49,56,000 ಎಂದು ಅಂದಾಜಿಸಲಾಗಿದ್ದು, ಇತರೆ ಸೊತ್ತುಗಳ ಮೌಲ್ಯ ಸೇರಿದಂತೆ ಒಟ್ಟು ₹1,05,59,450 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 113/2026ರಂತೆ NDPS ಕಾಯ್ದೆಯ ಕಲಂ 8(C) r/w 22(C), 21(B) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
