



ವಿಟ್ಲ: ಅಂಚೆ ಕಚೇರಿ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನದಿಂದ ಹೊಸ ಹೆಲ್ಮೆಟ್ ಕಳ್ಳತನ ಮಾಡಿದ ಘಟನೆ ವಿಟ್ಲದಲ್ಲಿ ನಡೆದಿದೆ. ಕಳ್ಳನ ಕೈಚಳಕ ಪಕ್ಕದಲ್ಲಿದ್ದ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ.


ವಿಟ್ಲ ಪಡೂರು ಗ್ರಾಮದ ಸರವು ನಿವಾಸಿ, ನ್ಯಾಯವಾದಿ ಹಾಗೂ ಜಲಶೋಧಕ ಶ್ರೀಧರ್ ಭಟ್ ಕುಕ್ಕೆಮನೆ ಅವರು ಕಳ್ಳತನಕ್ಕೊಳಗಾದ ಹೆಲ್ಮೆಟ್‌ನ ಮಾಲೀಕರಾಗಿದ್ದಾರೆ.

ಆಗಸ್ಟ್ 8ರಂದು ಬೆಳಗ್ಗೆ ಶ್ರೀಧರ್ ಭಟ್ ಅವರು ವಿಟ್ಲ ಅಂಚೆ ಕಚೇರಿ ಬಳಿ ತಮ್ಮ ಸ್ಕೂಟರ್ ನಿಲ್ಲಿಸಿ ದೇವಸ್ಥಾನಕ್ಕೆ ತೆರಳಿದ್ದರು. ಬಳಿಕ ಹಿಂದಿರುಗಿ ಬಂದು ನೋಡಿದಾಗ ಸ್ಕೂಟರ್ ಮೇಲಿದ್ದ ಹೊಸ ಹೆಲ್ಮೆಟ್ ನಾಪತ್ತೆಯಾಗಿತ್ತು. ಅದರ ಬದಲಿಗೆ ಯಾರೋ ಹಳೆಯ ಹೆಲ್ಮೆಟ್‌ವೊಂದನ್ನು ಇಟ್ಟು ಹೋಗಿದ್ದರು.
ಅನುಮಾನಗೊಂಡ ಶ್ರೀಧರ್ ಭಟ್ ಅವರು ಸುತ್ತಮುತ್ತಲಿನ ಸಿ.ಸಿ. ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳ್ಳತನದ ದೃಶ್ಯ ಬಯಲಾಗಿದೆ.
ಕಪ್ಪು ಬಣ್ಣದ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಫೋನ್‌ನಲ್ಲಿ ಮಾತನಾಡುತ್ತಾ, ಏನೂ ತಿಳಿಯದವನಂತೆ ನಟಿಸಿ ಶ್ರೀಧರ್ ಭಟ್ ಅವರ ಸ್ಕೂಟರ್ ಬಳಿ ಬಂದಿದ್ದಾನೆ. ಬಳಿಕ ತನ್ನ ಹಳೆಯ ಹೆಲ್ಮೆಟ್‌ನ್ನು ಸ್ಕೂಟರ್ ಮೇಲೆ ಇಟ್ಟು, ಅಲ್ಲಿದ್ದ ಹೊಸ ಹೆಲ್ಮೆಟ್‌ನ್ನು ತನ್ನ ತಲೆಗೆ ಧರಿಸಿಕೊಂಡು ಅಲ್ಲಿಂದ ಪರಾರಿಯಾಗಿರುವುದು ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನೆ ಕುರಿತು ಶ್ರೀಧರ್ ಭಟ್ ಅವರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸಿ.ಸಿ. ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ, ಕಳ್ಳನ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
