




ಪುತ್ತೂರು/ಮಂಗಳೂರು, ಜು. 26: ಕಾರ್ಗಿಲ್ ವಿಜಯ ದಿವಸ್, 136ನೇ ‘ಮನ್ ಕೀ ಬಾತ್’ ಕಾರ್ಯಕ್ರಮ, ಎಸ್‌ಐಆರ್ ಮಹಾ ಅಭಿಯಾನ ಹಾಗೂ ಹಿರಿಯ ಕಾರ್ಯಕರ್ತರ ಭೇಟಿ ಸೇರಿದಂತೆ ವಿವಿಧ ಸಂಘಟನಾ ಕಾರ್ಯಕ್ರಮಗಳಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಭಾನುವಾರ ದಿನವಿಡೀ ಪುತ್ತೂರು ಮತ್ತು ಮಂಗಳೂರು ಭಾಗಗಳಲ್ಲಿ ಬಿರುಸಿನ ಸಂಚಾರ ನಡೆಸಿದರು.

ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಪುತ್ತೂರಿನ ಮಾಜಿ ಸೈನಿಕ ಸುರೇಶ್ ಶೆಣೈ ಅವರ ಮನೆಗೆ ಭೇಟಿ ನೀಡಿ ಅವರನ್ನು ಸನ್ಮಾನಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 12 ವರ್ಷಗಳ ಸುಶಾಸನದ ಪ್ರಯುಕ್ತ ಪಕ್ಷದ ಹಿರಿಯ ಕಾರ್ಯಕರ್ತರಾದ ಚೆನ್ನಮ್ಮ, ಅಶೋಕ್ ಅಣ್ಣ, ವಾಸುದೇವ ಪೈ ಹಾಗೂ ಗಣೇಶ್ ಹೆಗಡೆ ಅವರ ಮನೆಗಳಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.
ಬಳಿಕ ಪುತ್ತೂರು ಸಂಜಯನಗರದ ಬೂತ್ ಸಂಖ್ಯೆ 150ರಲ್ಲಿ ಕಾರ್ಯಕರ್ತರೊಂದಿಗೆ ಪ್ರಧಾನಿಯವರ 136ನೇ ‘ಮನ್ ಕೀ ಬಾತ್’ ಕಾರ್ಯಕ್ರಮವನ್ನು ವೀಕ್ಷಿಸಿದರು.
ಇದೇ ವೇಳೆ ಎಸ್‌ಐಆರ್ ಮಹಾ ಅಭಿಯಾನದಡಿ ಸಂಜಯನಗರ, ಬೆದ್ರಾಳ, ಸಾಲ್ಮರ, ಕೃಷ್ಣನಗರ, ತಾರಿಗುಡ್ಡೆ, ದರ್ಬೆ, ಮುಕ್ರಪಾಡಿ, ಬನ್ನೂರು, ಕಲ್ಲೇಗ ಹಾಗೂ ನೆಲ್ಲಿಕಟ್ಟೆ ಸೇರಿದಂತೆ ವಿವಿಧ ಬೂತ್ ವ್ಯಾಪ್ತಿಗಳಲ್ಲಿ ಮನೆ-ಮನೆ ಸಂಪರ್ಕ, ಪಾದಯಾತ್ರೆ ಹಾಗೂ ಪ್ರಮುಖರ ಸಭೆಗಳಲ್ಲಿ ಭಾಗವಹಿಸಿ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.
ಈ ಕಾರ್ಯಕ್ರಮಗಳಲ್ಲಿ ಬಿಜೆಪಿ ಪುತ್ತೂರು ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಕಾರ್ಯದರ್ಶಿ ಶಶಿಧರ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತಾ, ಉಪಾಧ್ಯಕ್ಷ ಸಂತೋಷ್ ಕುಮಾರ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
