



ನೀಟ್ ಹೋರಾಟಕ್ಕೆ ಧಾರ್ಮಿಕ ಬಣ್ಣ ಬಳಿದು, ಸಮುದಾಯಗಳ ನಡುವೆ ವೈಮನಸ್ಸು ಉಂಟುಮಾಡುವ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಅವಹೇಳನಕಾರಿ ಬರಹವನ್ನು ವಾಟ್ಸಾಪ್ ಸ್ಟೇಟಸ್‌ನಲ್ಲಿ ಪ್ರಸಾರ ಮಾಡಿದ ಆರೋಪದಡಿ ವಿಟ್ಲ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.


ದೂರಿನ ಪ್ರಕಾರ, KFC KHANDIGA ಎಂಬ ವಾಟ್ಸಾಪ್ ಗುಂಪಿನಲ್ಲಿ ಹರಿದಾಡಿದ ಸ್ಕ್ರೀನ್‌ಶಾಟ್‌ನ್ನು ಪರಿಶೀಲಿಸಿದಾಗ, ಬಂಟ್ವಾಳ ಕೇಪು ನಿವಾಸಿ ಭರತ್ (36) ಎಂಬಾತ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಮತ್ತು ಸಮುದಾಯಗಳ ನಡುವೆ ವೈಮನಸ್ಸು ಸೃಷ್ಟಿಸುವ ರೀತಿಯ ಬರಹವನ್ನು ಪ್ರಕಟಿಸಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 160/2026 ದಾಖಲಿಸಲಾಗಿದ್ದು, ಬಿಎನ್‌ಎಸ್ 2023ರ ಕಲಂ 197(1)(a), 197(1)(c) ಹಾಗೂ 353(2) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ.
ತನಿಖೆಯ ವೇಳೆ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.
