



ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪುದುವೆಟ್ಟು ಗ್ರಾಮದ ಪದವು–ಬೊಳ್ಮನಾರ್ ಮುಖ್ಯರಸ್ತೆಯ ದುಸ್ಥಿತಿಗೆ ಶಾಸಕ ಹರೀಶ್ ಪೂಂಜ ಅವರ ಮುತುವರ್ಜಿಯಿಂದ ತಕ್ಷಣದ ಸ್ಪಂದನೆ ದೊರೆತಿದೆ.


ಇತ್ತೀಚಿನ ಭಾರೀ ಮಳೆಯಿಂದ ರಸ್ತೆ ಹದಗೆಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಶಾಸಕ ಹರೀಶ್ ಪೂಂಜ ಅವರ ಸೂಚನೆಯಂತೆ ರಸ್ತೆ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಲಾಗಿದೆ.

ಸದ್ಯ ರಸ್ತೆಯಲ್ಲಿ ವೆಟ್ ಮಿಕ್ಸ್ ಹಾಕಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದ್ದು, ಮಳೆನೀರು ರಸ್ತೆಯಲ್ಲಿ ನಿಲ್ಲದಂತೆ ಅಗತ್ಯ ಚರಂಡಿ ನಿರ್ಮಾಣ ಕಾರ್ಯವೂ ಆರಂಭಿಸಲಾಗಿದೆ.
ಇನ್ನು ಈ ರಸ್ತೆಯ ಶಾಶ್ವತ ಮರುಡಾಮರೀಕರಣ ಕಾಮಗಾರಿಗಾಗಿ ಈಗಾಗಲೇ ₹30 ಲಕ್ಷ ಅನುದಾನ ಮಂಜೂರಾಗಿದ್ದು, ಆಡಳಿತಾತ್ಮಕ ಅನುಮೋದನೆಯೂ ದೊರೆತಿದೆ. ಆದರೆ ಪ್ರಸ್ತುತ ಮಳೆಗಾಲ ಇರುವುದರಿಂದ ಶಾಶ್ವತ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗದ ಕಾರಣ ತಾತ್ಕಾಲಿಕ ದುರಸ್ತಿ ಕಾಮಗಾರಿ ನಡೆಸಲಾಗಿದೆ.
ಮಳೆಗಾಲ ಮುಗಿದ ತಕ್ಷಣವೇ ರಸ್ತೆ ಮರುಡಾಮರೀಕರಣ ಕಾಮಗಾರಿ ಆರಂಭವಾಗಲಿದ್ದು, ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣದ ಮೂಲಕ ಸಾರ್ವಜನಿಕರ ಬಹುಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ.
